ಮುಂಬೈ/ನಾಗ್ಪುರ: ಮೂರು ಹಾಗೂ ನಾಲ್ಕು ವರ್ಷದ ಬಾಲಕಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ವಿರೋಧ ಪಕ್ಷಗಳ ಮೈತ್ರಿಕೂಟ 'ಮಹಾ ವಿಕಾಸ ಆಘಾಡಿ'ಯು ಶನಿವಾರ ರಾಜ್ಯದಾದ್ಯಂತ ಮೌನ ಪ್ರತಿಭಟನೆ ನಡೆಸಿತು. ಶಿವಸೇನಾ (ಉದ್ಧವ್ ಬಣ), ಎನ್‌ಸಿಪಿ (ಶರದ್ ಬಣ) ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬಾಯಿಗೆ ಕಪ್ಪು ಬಟ್ಟೆ ಧರಿಸಿ, ತಲೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ನಡೆಸಿದರು.
'ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಾಜ್ಯ ಸರ್ಕಾರವು ಅವರನ್ನು ರಕ್ಷಿಸುತ್ತಿದೆ. ರಾಜ್ಯವು ಇಂಥ ನಾಚಿಕೆಗೇಡಿನ ಸರ್ಕಾರವನ್ನು ಹಿಂದೆಂದೂ ನೋಡಿರಲಿಲ್ಲ. ಕೈಗಳಿಗೆ ರಾಕಿ ಕಟ್ಟಿಸಿಕೊಳ್ಳುವಲ್ಲಿ 'ಕಂಸ ಮಾಮ' ಬ್ಯುಸಿ ಆಗಿದ್ದಾರೆ. ಆದರೆ, ತಮ್ಮ ಸಹೋದರಿಯರಿಗೆ ಯಾವಾಗ ನ್ಯಾಯ ಸಿಗಲಿದೆ ಎಂದು 'ಕಂಸ ಮಾವ' ಹೇಳಬೇಕು' ಎಂದು ಶಿವಸೇವಾ (ಉದ್ಧವ್ ಬಣ) ಮುಖ್ಯಸ್ಥ ಉದ್ಧವ್ ಠಾಕ್ರೆ ಆಕ್ರೋಶ ವ್ಯಕ್ತಪಡಿಸಿದರು.
ಎನ್‌ಸಿಪಿ (ಶರದ್ ಬಣ) ಮುಖ್ಯಸ್ಥ ಶರದ್ ಪವಾರ್ ಮಾತನಾಡಿ, 'ಬದ್ಲಾಪುರ ಪ್ರಕರಣವು ರಾಷ್ಟ್ರಮಟ್ಟದಲ್ಲಿ ರಾಜ್ಯದ ಮಾನವನ್ನು ಹರಾಜು ಹಾಕಿದೆ. ಮಹಿಳೆಯರ ರಕ್ಷಣೆ ತನ್ನ ಜವಾಬ್ದಾರಿ ಎಂಬುದನ್ನು ಈ ಸರ್ಕಾರ ಮರೆತಂತಿದೆ. ಮಹಿಳೆಯರ ಮೇಲೆ ದೌರ್ಜನ್ಯ ನಡೆಸುವವರ ತಲೆಯನ್ನು ಕತ್ತರಿಸುತ್ತಿದ್ದ ಛತ್ರಪತಿ ಶಿವಾಜಿ ನೆಲದಲ್ಲಿ ಇಂಥ ಘಟನೆ ನಡೆದಿದೆ' ಎಂದರು.
'ಮಹಿಳೆಯರ ಹಾಗೂ ಮಕ್ಕಳ ಮೇಲಿನ ಬಹುತೇಕ ಅಪರಾಧಗಳು ಠಾಣೆ ಜಿಲ್ಲೆಯಲ್ಲಿಯೇ ನಡೆಯುತ್ತಿವೆ. ಇವುಗಳನ್ನು ಶಿನಸೇನಾದ (ಶಿಂದೆ ಬಣ) ಕಾರ್ಯಕರ್ತರೇ ಎಸಗುತ್ತಿದ್ದಾರೆ. ಮುಖ್ಯಮಂತ್ರಿ ಶಿಂದೆ ಅವರು ಠಾಣೆಯ ಪ್ರಭಾವಶಾಲಿ ನಾಯಕ. ಇವರು ಮುಖ್ಯಮಂತ್ರಿ ಆಗಿರುವುದರಿಂದ ಅವರ ಕಾರ್ಯಕರ್ತರಿಗೆ ಭಯವೇ ಇಲ್ಲದಂತಾಗಿದೆ' ಎಂದು ಕಾಂಗ್ರೆಸ್ ನಾಯಕ ವಿಜಯ್ ವಡೆಟ್ಟೀವರ್ ಅಭಿಪ್ರಾಯಪಟ್ಟರು.
ಬಿಜೆಪಿಯಿಂದಲೂ ಪ್ರತಿಭಟನೆ: 'ಮಹಾ ವಿಕಾಸ ಆಘಾಡಿ' ಶನಿವಾರ ನಡೆಸಿದ ಪ್ರತಿಭಟನೆಯನ್ನು ವಿರೋಧಿಸಿ ಬಿಜೆಪಿಯೂ ಬಾಯಿಗೆ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದೆ. 'ಬದ್ಲಾಪುರದಂಥ ದೌರ್ಜನ್ಯದ ಪ್ರಕರಣಗಳನ್ನು ಇಟ್ಟುಕೊಂಡು ವಿರೋಧ ಪಕ್ಷಗಳು ಆಯೋಜಿಸಿದ್ದ ಬಂದ್‌ಗೆ ಹೈಕೋರ್ಟ್ ತಡೆ ನೀಡಿತ್ತು. ಮುಂಬರುವ ವಿಧಾನಸಭೆ ಚುನಾವಣೆಯ ಕಾರಣಕ್ಕಾಗಿ ಇವರು ಈ ಪ್ರಕರಣವನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ಹತಾಶ ಯತ್ನ ನಡೆಸುತ್ತಿದ್ದಾರೆ' ಎಂದು ಮುಂಬೈನ ಬಿಜೆಪಿ ಘಟಕದ ಅಧ್ಯಕ್ಷ ಧೀರಜ್ ಘಾಟೆ ತಿಳಿಸಿದರು.