ವಾಷಿಂಗ್ಟನ್: 'ಕೋವಿಡ್ 19 ಪಿಡುಗಿನ ವೇಳೆ ಕೋವಿಡ್ ಸಂಬಂಧಿತ ಮಾಹಿತಿಗಳನ್ನು ತೆಗೆದು ಹಾಕುವಂತೆ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತದ ಅಧಿಕಾರಿಗಳು ಫೇಸ್‌ಬುಕ್ ಮೇಲೆ ಒತ್ತಡ ಹೇರಿದ್ದರು. ಇಂತಹ ಒತ್ತಡದ ಬೇಡಿಕೆಗಳು ಮತ್ತೆ ಎದುರಾದರೆ ಕಡೆಗಣಿಸುವ ಸಂಕಲ್ಪ ಮಾಡಲಾಗಿತ್ತು' ಎಂದು ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ.
ಸಂಸತ್ತಿನ ನ್ಯಾಯಾಂಗ ಸಮಿತಿಯ ಅಧ್ಯಕ್ಷರಾದ ರಿಪಬ್ಲಿಕನ್ ಪಕ್ಷದ ಜಿಮ್ ಜೋರ್ಡಾನ್ ಅವರಿಗೆ ಬರೆದ ಪತ್ರದಲ್ಲಿ, ಜುಕರ್‌ಬರ್ಗ್ ಅವರು ಈ ವಿಷಯ ತಿಳಿಸಿದ್ದಾರೆ.
' ಶ್ವೇತಭವನದ ಅಧಿಕಾರಿಗಳು ಸೇರಿದಂತೆ ಕೆಲವು ಅಧಿಕಾರಿಗಳು, 'ಹಾಸ್ಯ ಮತ್ತು ವಿಡಂಬನೆ ಸೇರಿದಂತೆ ಕೋವಿಡ್-19ಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ತೆಗೆದುಹಾಕಲು ಫೇಸ್‌ಬುಕ್ ಮೇಲೆ ಪದೇ ಪದೇ ಒತ್ತಡ ಹೇರಿದ್ದರು' ಎಂದು ಪತ್ರದಲ್ಲಿ ಆರೋಪಿಸಿದ್ದಾರೆ.
'ಅವರ ಬೇಡಿಕೆಗೆ ಕಂಪನಿಯು ಒಪ್ಪದಿದ್ದಾಗ ಅಧಿಕಾರಿಗಳು ತುಂಬಾ ಹತಾಶೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ಒತ್ತಡ ಹೇರಿದ್ದು ತಪ್ಪು ಎನ್ನುವುದು ನನ್ನ ನಂಬಿಕೆ. ನಾವು ಅದರ ಬಗ್ಗೆ ಹೆಚ್ಚು ಬಹಿರಂಗವಾಗಿ ಮಾತನಾಡಲಿಲ್ಲ. ಇದಕ್ಕಾಗಿ ನಾನು ವಿಷಾದಿಸುವೆ' ಎಂದು ಜುಕರ್‌ಬರ್ಗ್ ಅವರು ಆಗಸ್ಟ್ 26ರಂದು ಸಮಿತಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ. ಅಲ್ಲದೆ, ಈ ಪತ್ರವನ್ನು ಫೇಸ್‌ಬುಕ್ ಮತ್ತು 'ಎಕ್ಸ್'ನಲ್ಲೂ ಪೋಸ್ಟ್ ಮಾಡಿದ್ದಾರೆ.
ಅಧ್ಯಕ್ಷೀಯ ಚುನಾವಣೆಯ ಸಮಯದಲ್ಲಿ ವಿಶೇಷವಾಗಿ ಕೆಲವು ಪೋಸ್ಟ್‌ಗಳನ್ನು ಅಳಿಸಲಾಗಿತ್ತು ಅಥವಾ ನಿರ್ಬಂಧಿಸಲಾಗಿತ್ತು. ಅಲ್ಲದೆ, ಕೋವಿಡ್- 19ರ ಪಿಡುಗಿನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿತ್ತು ಎನ್ನುವ ಆರೋಪಗಳನ್ನು ಅಲ್ಲಗಳೆಯುವುದಕ್ಕಾಗಿ ಜುಕರ್‌ಬರ್ಗ್ ಅವರು 2020ರಲ್ಲಿ ಈ ಪತ್ರ ಬರೆದಿದ್ದಾರೆ.
'ಇಂತಹದ್ದೇನಾದರೂ ಮತ್ತೆ ಸಂಭವಿಸಿದರೆ ನಾವು ಅದನ್ನು ಕಡೆಗಣಿಸಲು ಸಿದ್ಧರಿದ್ದೇವೆ' ಎಂದೂ ಅವರು ಹೇಳಿದ್ದಾರೆ.