ಪಾಲಕ್ಕಾಡ್: ಕೇರಳದ ಪಾಲಕ್ಕಾಡ್‌ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) 'ಅಖಿಲ ಭಾರತೀಯ ಸಮನ್ವಯ ಬೈಠಕ್' ಶನಿವಾರ ಆರಂಭವಾಗಿದೆ.
ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ , ವಿಶ್ವ ಹಿಂದೂ ಪರಿಷತ್ ಮುಖ್ಯಸ್ಥ ಅಲೋಕ್ ಕುಮಾರ್ ಮತ್ತು ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷ ಹಿರಣ್ಮಯ್ ಪಾಂಡ್ಯ ಸೇರಿದಂತೆ ಸಂಘದಿಂದ ಪ್ರೇರಿತರಾದ 32 ಸಂಘಟನೆಗಳ ರಾಷ್ಟ್ರೀಯ ಮಟ್ಟದ ನಾಯಕರು ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಆರ್‌ಎಸ್‌ಎಸ್ ಪ್ರಕಟಣೆಯಲ್ಲಿ ತಿಳಿಸಿದೆ.
ರಾಷ್ಟ್ರೀಯ ಮಟ್ಟದ ಸಮನ್ವಯ ಸಭೆಯ ಮೊದಲ ದಿನ, 32 ಸಂಘಟನೆಗಳ ಮುಖಂಡರು ಮತ್ತು ಮಹಿಳೆಯರನ್ನು ಒಳಗೊಂಡ ಸುಮಾರು 300 ಕಾರ್ಯಕರ್ತರು ಭಾಗವಹಿಸಿದ್ದಾರೆ. ವಯನಾಡ್‌ನಲ್ಲಿ ಇತ್ತೀಚೆಗೆ ಸಂಭವಿಸಿದ್ದ ಭೂಕುಸಿತ ಸಂತ್ರಸ್ತರಿಗೆ ಆರ್‌ಎಸ್‌ಎಸ್ ಕಾರ್ಯಕರ್ತರು ನೀಡಿದ ಪರಿಹಾರ ಮತ್ತು ಸೇವೆಯ ಬಗ್ಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ತಿಳಿಸಲಾಯಿತು.
ವಿವಿಧ ಸಂಸ್ಥೆಗಳ ಸಂಘಟನಾ ಕಾರ್ಯದರ್ಶಿಗಳು ತಮ್ಮ ಚಟುವಟಿಕೆಗಳ ಬಗ್ಗೆ ಮಾಹಿತಿ ಮತ್ತು ಅನುಭವಗಳನ್ನು ಹಂಚಿಕೊಂಡರು. ಇದಲ್ಲದೆ, ಸಭೆಯಲ್ಲಿ ಪ್ರಸ್ತುತ ಸನ್ನಿವೇಶ, ಇತ್ತೀಚಿನ ಪ್ರಮುಖ ಘಟನೆಗಳು ಮತ್ತು ಸಾಮಾಜಿಕ ಪರಿವರ್ತನೆಯ ಇತರ ಆಯಾಮಗಳು ಮತ್ತು ರಾಷ್ಟ್ರೀಯ ಹಿತಾಸಕ್ತಿಯ ವಿವಿಧ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು.
ವಿವಿಧ ವಿಷಯಗಳಲ್ಲಿ ಪರಸ್ಪರ ಸಹಕಾರ ಮತ್ತು ಸಮನ್ವಯ ಸಾಧಿಸಲು ಅಗತ್ಯ ಕ್ರಮಗಳ ಬಗ್ಗೆಯೂ ಸಂಘಟನೆಗಳ ಪ್ರತಿನಿಧಿಗಳು ಚರ್ಚಿಸಿದರು.
2025ರಲ್ಲಿ ತನ್ನ ಶತಮಾನೋತ್ಸವ ವರ್ಷಾಚರಣೆಯ ಅಂಗವಾಗಿ ರಾಷ್ಟ್ರೀಯ ಪ್ರಾಮುಖ್ಯತೆಯ ವಿವಿಧ ವಿಷಯಗಳ ಬಗ್ಗೆ ಮತ್ತು ಹೊಸದಾಗಿ ಆರಂಭಿಸಲು ಉದ್ದೇಶಿಸಿಸಲಾಗಿರುವ ಉಪಕ್ರಮಗಳ ಕುರಿತು 3 ದಿನಗಳ ಕಾಲ ಸಮನ್ವಯ ಸಭೆ ನಡೆಯಲಿದೆ ಎಂದು ಆರ್‌ಎಸ್‌ಎಸ್ ಶುಕ್ರವಾರ ತಿಳಿಸಿತ್ತು.