ಮಂಜೇಶ್ವರ : ಮಕ್ಕಳಲ್ಲಿ ಕೃಷಿಯ ಕುರಿತು ಆಸಕ್ತಿ ಮೂಡಿಸಲು ಹಾಗೂ ಕೃಷಿ ವಿಧಾನಗಳ ಕುರಿತು ತಿಳಿಯಲು ಕುಳೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬಯಲು ಪ್ರವಾಸ ಕೈಗೊಂಡರು.
ಕುಳೂರಿನ ಪ್ರಗತಿಪರ ಕೃಷಿಕ ಹಾಗೂ ಪಾರಂಪರ್ಯ ಕೃಷಿ ವಿಧಾನವನ್ನು ಅಳವಡಿಸಿ ಮುಂದುವರಿಯುತ್ತಿರುವ ಪಿ. ಆರ್. ಶೆಟ್ಟಿ ಪೊಯ್ಯೇಲುರವರ ಕೃಷಿ ಜಮೀನಿಗೆ ಶಾಲಾ ವಿದ್ಯಾರ್ಥಿಗಳು ಭೇಟಿ ನೀಡಿ ಭತ್ತ, ಅಡಿಕೆ, ತೆಂಗು, ತರಕಾರಿ ಹಾಗೂ ಹಣ್ಣು ಹಂಪಲುಗಳ ಕೃಷಿ ವಿಧಾನಗಳ ಬಗ್ಗೆ ತಿಳಿದುಕೊಂಡರು. ಜೊತೆಗೆ ಗದ್ದೆಗೆ ಇಳಿದು ನೇಜಿ ನೆಡುವ ಮೂಲಕ ನೈಜ ಅನುಭವವನ್ನು ಪಡೆದರು.
ಕೃಷಿ ಕೆಲಸಗಳು ಹಾಗೂ ವಿಧಾನಗಳ ಬಗ್ಗೆ ಪಿ. ಆರ್. ಶೆಟ್ಟಿ ಪೊಯ್ಯೇಲುರವರ ಜೊತೆ ಸಂದರ್ಶನ ನಡೆಸಿ ಹಿಂದಿನ ಹಾಗೂ ಈಗಿನ ಕೃಷಿ ವಿಧಾನದಲ್ಲಿ ಆದ ಆಮೂಲಾಗ್ರ ಬದಲಾವಣೆಗಳ ಬಗ್ಗೆ ತಿಳಿದುಕೊಂಡರು. ಅಧ್ಯಾಪಕ ಜಯಪ್ರಶಾಂತ್ ಪಾಲೆಂಗ್ರಿ ಈ ಬಯಲು ಪ್ರವಾಸವನ್ನು ಸಂಘಟಿಸಿದರು.