ಮಧೂರು: ಕುಂಬಳೆ ಸೀಮೆಯ ಇತಿಹಾಸ ಪ್ರಸಿದ್ಧ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ 2025 ಮಾರ್ಚ್ 27ರಿಂದ ಏಪ್ರಿಲ್ 7ರವರೆಗೆ ನಡೆಯಲಿರುವ ಅಷ್ಟ ಬಂಧ ಬ್ರಹ್ಮ ಕಲಶೋತ್ಸವ ಹಾಗೂ ಮೂಡಪ್ಪ ಸೇವೆಗೆ ಅಗತ್ಯವಿರುವ ಅಕ್ಕಿ ಸಂಗ್ರಹಕ್ಕೆ ಏರಿಕ್ಕಳ ಬಯಲಿನಲ್ಲಿ ಭತ್ತದ ಕೃಷಿಗೆ ಚಾಲನೆ ನೀಡಲಾಯಿತು.
ಮಧೂರು ಕ್ಷೇತ್ರದಲ್ಲಿ ಪ್ರಧಾನ ಆರ್ಚಕ ಶ್ರೀಕೃಷ್ಣ ಉಪಾಧ್ಯಾಯ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಏರಿಕ್ಕಳ ಬಯಲಿನಲ್ಲಿರುವ ವಯನಾಡು ಕುಲವನ್, ರಕ್ತೇಶ್ವರಿ ನಾಗಬನದ ಮುಂಭಾಗದಲ್ಲಿರುವ ವಿಶಾಲವಾದ ಭತ್ತದ ಗದ್ದೆಯಲ್ಲಿ ಭತ್ತದ ಬಿತ್ತನೆ ಕಾರ್ಯಕ್ರಮ ನಡೆಯಿತು.
ಬ್ರಹ್ಮಕಲಶ ಸಮಿತಿ ಪದಾಧಿಕಾರಿಗಳು, ಅಪಾರ ಸಂಖ್ಯೆಯಲ್ಲಿ ಕೃಷಿಕ ಬಂಧುಗಳು ಹಾಗೂ ಭಕ್ತ ಮಹಾಜನರ ಉಪಸ್ಥಿತಿಯಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿತು. ಈ ಸಂದರ್ಭ ಧಾರ್ಮಿಕ ಮುಂದಾಳು, ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ಕ್ಷೇತ್ರದ ಆಡಳಿತ ಮೊಕ್ತೇಸರ ಉದ್ಯಮಿ ಕೆ ಕೆ ಶೆಟ್ಟಿ ಅವರು ಬಿತ್ತನೆ ಬೀಜ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಮಿತಿಯ ಸದಸ್ಯರಾದ ಜಯದೇವ ಖಂಡಿಗೆ, ಮಂಜುನಾಥ ಕಾಮತ್, ಗಿರೀಶ್ ಸಂಧ್ಯಾ, ಶೀನ ಶೆಟ್ಟಿ ಕಜೆ ಮೊದಲಾದವರು ಉಪಸ್ಥಿತರಿದ್ದರು. ಮಾದರಿ ಕೃಷಿಕ ಅಶೋಕ ಆಳ್ವ ಅವರ ನೇತೃತ್ವದಲ್ಲಿ ಬಿತ್ತನೆ ಕಾರ್ಯಕ್ರಮ ನಡೆಯಿತು.