ಟೊರೊಂಟೊ: ಕೇರಳೀಯರ ಪ್ರತಿಭೆಗೆ ಮತ್ತೊಂದು ಮನ್ನಣೆ ಲಭಿಸಿದೆ. ಕೇರಳೀಯೆ ಮಿಲಿ ಭಾಸ್ಕರ್ ಅವರು ಮಿಸೆಸ್ ಕೆನಡಾ ಅರ್ಥ್ 2024 ಎಂದು ಕಿರೀಟವನ್ನು ಪಡೆದರು. ಸ್ಪರ್ಧೆಯಲ್ಲಿ ಕೆನಡಾದ ಸುಂದರಿಯರನ್ನು ಪರಾಭವಗೊಳಿಸಿ ಕಣ್ಣೂರು ತಲಾಪ್ ನಿವಾಸಿ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ತಲಾಪ್ ಹಳೆ ಬಸ್ ನಿಲ್ದಾಣದ ಬಳಿಯ ‘ಮಾಧವಂ’ ಮನೆಯಲ್ಲಿ ವಾಸವಿರುವ ಟಿ.ಸಿ.ಭಾಸ್ಕರನ್ ಮತ್ತು ಜಯ ದಂಪತಿಯ ಏಕೈಕ ಪುತ್ರಿ ಮಿಲಿ.
ಭಾರತೀಯರೊಬ್ಬರು ಈ ಸಾಧನೆ ಮಾಡಿರುವುದು ಇದೇ ಮೊದಲು. ಮಿಲಿ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಇಂಜಿನಿಯರ್. ಅವರು ತಮ್ಮ ಪತಿ ಮಹೇಶ್ ಕುಮಾರ್ ಮತ್ತು ಮಕ್ಕಳಾದ ತಮನ್ನಾ ಮತ್ತು ಅರ್ಮಾನ್ ಅವರೊಂದಿಗೆ 2016 ರಲ್ಲಿ ಕೆನಡಾಕ್ಕೆ ತೆರಳಿದ್ದರು. ಮಿಸೆಸ್ ಕೆನಡಾ ಅರ್ಥ್ ಸ್ಪರ್ಧೆಯನ್ನು ಗೆದ್ದ ನಂತರ, ಮಿಲೆ ಮುಂದಿನ ವರ್ಷ ಮಿಸೆಸ್ ಗ್ಲೋಬಲ್ ಅರ್ಥ್ ಸ್ಪರ್ಧೆಯಲ್ಲಿ ಕೆನಡಾವನ್ನು ಪ್ರತಿನಿಧಿಸಲಿದ್ದಾರೆ. ಮಿಲಿ ಯೋಗ ತರಬೇತುದಾರರೂ ಹೌದು. ಪತಿ ಮಹೇಶ್ ಕುಮಾರ್ ಐಟಿ ಇಂಜಿನಿಯರ್. ಅವರ ತಂದೆ ಭಾಸ್ಕರನ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಮುಖ್ಯ ವ್ಯವಸ್ಥಾಪಕರು. ತಾಯಿ ಜಯ ಕಣ್ಣೂರು ಜಿಲ್ಲಾ ಬ್ಯಾಂಕ್‍ನ ಮಾಜಿ ಪ್ರಧಾನ ವ್ಯವಸ್ಥಾಪಕಿ.
ಕಣ್ಣೂರು ಚಿನ್ಮಯ ವಿದ್ಯಾಲಯ ಮತ್ತು ನಂತರ ಕಾಸರಗೋಡಿನ ಎಲ್ ಬಿ ಎಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ವ್ಯಾಸಂಗಗೈದಿದ್ದರು ಮಿಲಿ. ಎಲ್‍ಬಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಎಲೆಕ್ಟ್ರಾನಿಕ್ಸ್‍ನಲ್ಲಿ ಪದವಿ ಮತ್ತು ಬೆಂಗಳೂರು ಜೈನ್ ಇನ್‍ಸ್ಟಿಟ್ಯೂಟ್‍ನಿಂದ ಹಣಕಾಸು ಮತ್ತು ಮಾರ್ಕೆಟಿಂಗ್‍ನಲ್ಲಿ ಮ್ಯಾನೇಜ್‍ಮೆಂಟ್ ಪದವಿ ಪಡೆದಿರುವ ಮಿಲಿ, ರಿಷಿಕೇಶದಿಂದ ಯೋಗ ಶಿಕ್ಷಕರ ಕೋರ್ಸ್ ಅನ್ನು ಸಹ ಪೂರ್ಣಗೊಳಿಸಿದ್ದಾರೆ.