ಕಾಸರಗೋಡು: ಮಂಗಳೂರಿನಲ್ಲಿ ಖೋಟಾ ನೋಟು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಪೊಲೀಸರ ತಂಡ ಖೋಟಾ ನೋಟು ಮುದ್ರಿಸುತ್ತಿದ್ದ ಚೆರ್ಕಳದ ಶ್ರೀಲಿಪಿ ಮುದ್ರಣಾಲಯಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿದೆ.
ಮಂಗಳೂರು ಸೈಬರ್ ಇಕಾನಮಿಕ್ಸ್ ಏಂಡ್ ನಾರ್ಕೋಟಿಕ್ ಪೊಲೀಸ್ ಎಸ್.ಐ ಕೃಷ್ಣ ಬಾಯಾರ್ ನೇತೃತ್ವದ ತಂಡ ಆಗಮಿಸಿ ತನಿಖೆ ನಡೆಸಿದೆ.ಖೋಟಾ ನೋಟು ಮುದ್ರಿಸಲು ಬಳಸಿದ್ದ ಪ್ರಿಂಟರ್, ಕಂಪ್ಯೂಟರ್, ನೋಟು ಮುದ್ರಣಕ್ಕೆ ಬಳಸುತ್ತಿರುವ ಪೇಪರ್, ಮುದ್ರಣ ಸಂದರ್ಭ ಹಾಳಾದ ಹಾಗೂ ಹರಿದ ಖೋಟಾ ನೋಟುಗಳನ್ನೂ ಪತ್ತೆಹಚ್ಚಲಾಗಿದೆ. ಮುದ್ರಣಾಲಯದ ಮಾಲಿಕ ಕೊಳತ್ತೂರು ಕರಿಚ್ಚೇರಿ ಪೆರಳ ನಿವಾಸಿ ವಿ. ಪ್ರಿಯೇಶ್‍ನನ್ನು ಮುದ್ರಣಾಲಯಕ್ಕೆ ಕರೆತರಲಾಗಿತ್ತು. ಕಳೆದ ಮೂರು ತಿಂಗಳಿಂದ ಖೋಟಾ ನೋಟು ದಂಧೆ ನಡೆಯುತ್ತಿರಬೇಕೆಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.