ಕೊಟ್ಟಾಯಂ: ಚಿತ್ರರಂಗದಲ್ಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ ಹೇಮಾ ಸಮಿತಿಯ ವರದಿ ಬಿಡುಗಡೆ ವಿಚಾರವಾಗಿ ಮಹಿಳಾ ಆಯೋಗದ ಅಧ್ಯಕ್ಷೆ ಪಿ.ಸತಿದೇವಿ ಅವರು ಆರಂಭಿಕ ಸಿನಿಮಾ ತಾರೆ ರಂಜಿನಿ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಹೇಮಾ ಸಮಿತಿ ವರದಿ ಹೊರಬೀಳುವ ಮುನ್ನವೇ ರಂಜಿನಿ ಅವರು ತಮ್ಮ ಹೇಳಿಕೆಯಲ್ಲಿ ಏನೆಲ್ಲಾ ಬಹಿರಂಗ ಪಡಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕನ್ನು ರಕ್ಷಿಸಬೇಕು ಎಂದು ಆಗ್ರಹಿಸಿ ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿರುದ್ಧ ವಾಹಿನಿ ಚರ್ಚೆಯಲ್ಲಿ ವಾಗ್ದಾಳಿ ನಡೆಸಿದ ಸತಿದೇವಿ, ರಂಜಿನಿ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸುವ ನಿರೀಕ್ಷೆಯಿದೆ ಎಂದಿದ್ದು, ಈ ಹಿಂದೆ ಎತ್ತದಿದ್ದ ಬೇಡಿಕೆಯನ್ನು ಈಗ ಎತ್ತಲಾಗುತ್ತಿದೆ ಎಂದು ಆರೋಪಿಸಿದರು.
ಸಮಿತಿ ವರದಿ ಬಿಡುಗಡೆ ವಿಳಂಬದ ಹಿಂದೆ ರಂಜಿನಿ ಅವರ ಅರ್ಜಿ ಇದೆ ಎಂಬುದು ಸತಿದೇವಿ ಅವರ ಆರೋಪವಾಗಿದೆ. ಮಹಿಳಾ ಹಕ್ಕುಗಳ ರಕ್ಷಣೆ ಮಾಡಬೇಕಾದ ಮಹಿಳಾ ಆಯೋಗವೇ ತಮ್ಮ ವಿರುದ್ಧ ಇಂತಹ ಆರೋಪ ಮಾಡುತ್ತಿರುವುದು ವಿಷಾದನೀಯ ಎಂದು ಚರ್ಚೆಯಲ್ಲಿ ಪಾಲ್ಗೊಂಡಿದ್ದ ರಂಜಿನಿ ಬಹಿರಂಗವಾಗಿ ಹೇಳಿದರು.
ಹೇಮಾ ಸಮಿತಿಯ ವರದಿಯನ್ನು ಬಿಡುಗಡೆ ಮಾಡುವುದನ್ನು ತಾನು ವಿರೋಧಿಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ, ತನ್ನ ಹೇಳಿಕೆಗಳನ್ನು ಒಳಗೊಂಡಂತೆ ಇತರ ಹೇಳಿಕೆಗಳಲ್ಲಿ ಏನನ್ನು ಬಹಿರಂಗಪಡಿಸಲಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ತಾನು ಕಾನೂನುಬದ್ಧ ಹಕ್ಕನ್ನು ಹೊಂದಿದ್ದೇನೆ. ಇದನ್ನು ಖಾತ್ರಿಪಡಿಸಿಕೊಳ್ಳುವುದರ ವಿರುದ್ದ ಮಹಿಳಾ ಆಯೋಗ ತನ್ನ ವಿರುದ್ಧ ಹರಿಹಾಯ್ದಿದೆ. ಮಹಿಳಾ ಆಯೋಗ ವರದಿಯ ಪ್ರತಿಯನ್ನು ಕೇಳಬಹುದಿತ್ತು ಆದರೆ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.
ಅವರ ಹೇಳಿಕೆಗಳನ್ನು ಗೌಪ್ಯವಾಗಿಡಲಾಗುವುದು ಎಂದು ಹೇಮಾ ಸಮಿತಿ ಭರವಸೆ ನೀಡಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬಿಡುಗಡೆ ಮಾಡಿರುವ ವರದಿಯಲ್ಲಿ ಅವರ ಹೇಳಿಕೆ ಸೇರಿದೆಯೇ ಎಂಬುದು ತಿಳಿಯಬೇಕಿದೆ. ಅತ್ಯಂತ ಸೂಕ್ಷ್ಮವಾದ ವರದಿ ಬಿಡುಗಡೆಯಿಂದ ಯಾರಿಗಾದರೂ ತೊಂದರೆಯಾದರೆ ಯಾರು ಹೊಣೆ ಹೊರುತ್ತಾರೆ ಎಂದು ರಂಜಿನಿ ಪ್ರಶ್ನಿಸಿದ್ದಾರೆ.