ಚೆನ್ನೈ: ಭಗವಾನ್ ಶ್ರೀರಾಮನ ಅಸ್ತಿತ್ವದ ಕುರಿತಂತೆ ಡಿಎಂಕೆ ಸಚಿವರ ದ್ವಂದ್ವ ಹೇಳಿಕೆಯನ್ನು ಟೀಕಿಸಿರುವ ತಮಿಳುನಾಡು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಅಣ್ಣಾಮಲೈ, 'ರಾಮನ ಅಸ್ತಿತ್ವದ ಕುರಿತು ಡಿಎಂಕೆ ಸಚಿವರು ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ' ಎಂದು ಹೇಳಿದ್ದಾರೆ.

ಅರಿಯಲೂರಿನಲ್ಲಿ ನಡೆದ ರಾಜ ರಾಜೇಂದ್ರ ಚೋಳನ ಜನ್ಮ ವಾರ್ಷಿಕೋತ್ಸವದಲ್ಲಿ ಮಾತನಾಡಿದ್ದ ಡಿಎಂಕೆ ಸಾರಿಗೆ ಸಚಿವ ಎಸ್.ಎಸ್. ಶಿವಶಂಕರ್, 'ರಾಜೇಂದ್ರ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲಾದ ಕೊಳಗಳು ಮತ್ತು ದೇವಾಲಯಗಳು ರಾಜನ ಅಸ್ತಿತ್ವವನ್ನು ತೋರಿಸಿವೆ. ಆದರೆ ರಾಮನ ಅಸ್ತಿತ್ವದ ಬಗ್ಗೆ ಇತಿಹಾಸದಲ್ಲಿ ಯಾವುದೇ ಪುರಾವೆಗಳಿಲ್ಲ' ಎಂದಿದ್ದರು.
ಇದರ ವಿಡಿಯೊವನ್ನು ಎಕ್ಸ್‌ನಲ್ಲಿ ಹಂಚಿಕೊಂಡಿರುವ ಅಣ್ಣಾಮಲೈ, 'ಕಳೆದ ವಾರ ಡಿಎಂಕೆ ಕಾನೂನು ಸಚಿವ ಎಸ್.ರಘುಪತಿ ಅವರು ಭಗವಾನ್ ರಾಮ ಸಾಮಾಜಿಕ ನ್ಯಾಯದ ಚಾಂಪಿಯನ್, ಜಾತ್ಯತೀತತೆಯ ಪ್ರವರ್ತಕ ಎಂದಿದ್ದರು. ಇದೀಗ ಡಿಎಂಕೆಯ ಇನ್ನೊಬ್ಬ ಸಚಿವ ರಾಮ ಅಸ್ತಿತ್ವದಲ್ಲೇ ಇರಲಿಲ್ಲ ಎನ್ನುತ್ತಾರೆ' ಎಂದು ಕುಟುಕಿದ್ದಾರೆ.
'ಹಠಾತ್ ಆಗಿ ಶ್ರೀರಾಮನ ಬಗ್ಗೆ ಡಿಎಂಕೆ ನಾಯಕರು ಆಸಕ್ತಿ ಬೆಳಸಿಕೊಳ್ಳುತ್ತಿರುವುದು ನಿಜಕ್ಕೂ ಅಚ್ಚರಿಯಾಗಿದೆ. ಇದನ್ನು ಯಾರು ಯೋಚಿಸಿದ್ದರು?' ಎಂದು ಲೇವಡಿ ಮಾಡಿದ್ದಾರೆ.
'ಇದು ಸರಿಯಾದ ಸಮಯವಾಗಿದ್ದು, ಶ್ರೀರಾಮನ ಅಸ್ತಿತ್ವದ ಕುರಿತು ಕುಳಿತು ಚರ್ಚಿಸಿ ಒಮ್ಮತದ ನಿರ್ಧಾರಕ್ಕೆ ಬರಬೇಕಿದೆ' ಎಂದು ಸಚಿವರಾದ ಎಸ್.ರಘುಪತಿ ಮತ್ತು ಎಸ್.ಎಸ್. ಶಿವಶಂಕರ್ ಅವರಿಗೆ ಸಲಹೆ ನೀಡಿದ್ದಾರೆ.