ಕೋಪೆನ್‌ಹೆಗನ್ : 29 ವರ್ಷಗಳ ಹಿಂದೆ ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ವಿಮಾನವೊಂದರಿಂದ ಶಸ್ತ್ರಾಸ್ತ್ರಗಳನ್ನು ಕೆಳಗೆ ಬೀಳಿಸಿದ್ದ ಪ್ರಕರಣದಲ್ಲಿ ಆರೋಪಿಯಾಗಿರುವ, ಡೆನ್ಮಾರ್ಕ್ ಪ್ರಜೆ ಹಸ್ತಾಂತರ ಕೋರಿ ಭಾರತ ಸಲ್ಲಿಸಿದ್ದ ಮನವಿಯನ್ನು ಸ್ಥಳೀಯ ಕೋರ್ಟ್ ಗುರುವಾರ ತಿರಸ್ಕರಿಸಿದೆ.
ಆರೋಪಿ ನೀಲ್ಸ್ ಹಾಕ್ ಎಂಬಾತನ ಹಸ್ತಾಂತರಕ್ಕೆ ಡೆನ್ಮಾರ್ಕ್‌ನ ನ್ಯಾಯಾಂಗ ಇಲಾಖೆ ಅನುಮತಿ ನೀಡಿತ್ತು. ಆದರೆ, ಹಿಲೆರಾಡ್ ಜಿಲ್ಲಾ ನ್ಯಾಯಾಲಯ, ನೀಲ್ಸ್ ಹಸ್ತಾಂತರಕ್ಕೆ ತಡೆ ನೀಡಿದೆ.
'ಆರೋಪಿಯ ಹಸ್ತಾಂತರಕ್ಕೆ ಸಂಬಂಧಿಸಿ ಭಾರತವು ಹೆಚ್ಚುವರಿಯಾಗಿ ರಾಜತಾಂತ್ರಿಕ ಖಾತರಿಗಳನ್ನು ಒದಗಿಸಿದೆ. ಆದಾಗ್ಯೂ, ಭಾರತದಲ್ಲಿ ನೀಲ್ಸ್ ಹಾಕ್‌ಗೆ ಚಿತ್ರಹಿಂಸೆ ಅಥವಾ ಆತನೊಂದಿಗೆ ಅಮಾನವೀಯವಾಗಿ ನಡೆದುಕೊಳ್ಳುವ ಅಪಾಯ ಇದೆ' ಎಂಬ ಕಾರಣ ನೀಡಿ, ಭಾರತದ ಮನವಿಯನ್ನು ಕೋರ್ಟ್ ತಿರಸ್ಕರಿಸಿದೆ.
'ನನ್ನನ್ನು ಭಾರತಕ್ಕೆ ಹಸ್ತಾಂತರಿಸಿದಲ್ಲಿ ನನ್ನ ಜೀವಕ್ಕೆ ಅಪಾಯ ಇದೆ' ಎಂಬುದಾಗಿ 62 ವರ್ಷದ ನೀಲ್ಸ್ ಕೋರ್ಟ್‌ಗೆ ತಿಳಿಸಿದ್ದ.
1995ರಲ್ಲಿ ಪುರುಲಿಯಾದಲ್ಲಿ, ಅಸಾಲ್ಟ್ ರೈಫಲ್‌ಗಳು, ರಾಕೆಟ್ ಲಾಂಚರ್ ಮತ್ತು ಕ್ಷಿಪಣಿಗಳನ್ನು ಸರಕು ಸಾಗಣೆ ವಿಮಾನವೊಂದರಿಂದ ಕೆಳಗೆ ಹಾಕಲಾಗಿತ್ತು. ಈ ಕಾರ್ಯದಲ್ಲಿ ತಾನು ಭಾಗಿಯಾಗಿದ್ದಾಗಿ ನೀಲ್ಸ್ ತಪ್ಪೊಪ್ಪಿಕೊಂಡಿದ್ದಾನೆ.
ಭಾರತದಲ್ಲಿನ ಕ್ರಾಂತಿಕಾರಿಗಳ ಗುಂಪಿಗಾಗಿ ಇವುಗಳನ್ನು ನೀಡಲಾಗಿತ್ತು ಎಂದು ಭಾರತದ ಪೊಲೀಸರು ಹೇಳಿದ್ದರು. ಈತನ ಹಸ್ತಾಂತರಕ್ಕಾಗಿ ಭಾರತ 2002ರಲ್ಲಿ ಮೊದಲು ಮನವಿ ಮಾಡಿತ್ತು. ನಂತರ, 2016ರಲ್ಲಿ ಮತ್ತೊಮ್ಮೆ ಮನವಿ ಮಾಡಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿ, ಒಬ್ಬ ಬ್ರಿಟನ್ ಹಾಗೂ ಐದು ಜನ ಲಾತ್ವಿಯಾ ಪ್ರಜೆಗಳನ್ನು ಭಾರತ ಬಂಧಿಸಿತ್ತು. ನೀಲ್ಸ್ ಪರಾರಿಯಾಗಿದ್ದ.