ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ಸನ್ನಿಧಿಯಲ್ಲಿ ನೂತನ ಭಸ್ಮಕೆರೆ ನಿರ್ಮಾಣಕ್ಕೆ ಇಂದು ಶಿಲಾನ್ಯಾಸ ನಡೆಸಲಾಯಿತು. ಬೆಳಗ್ಗೆ 7.30ಕ್ಕೆ ನಡೆದ ಸಮಾರಂಭದಲ್ಲಿ ದೇವಸ್ಥಾನದ ಈಶಾನ್ಯ ದಿಕ್ಕಿನಲ್ಲಿ ಮೀನ ರಾಶಿಯಲ್ಲಿ ನೂತನ ಕೆರೆ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಯಿತು.
ಆರ್ಕಿಟೆಕ್ಚರ್ ಸೈನ್ಸ್ ಸೆಂಟರ್ ಅಧ್ಯಕ್ಷ ಕೆ. ಮುರಳೀಧರನ್ ಸ್ಥಳ ಗುರುತಿಸಿದರು. ನಂತರ ಮಧ್ಯಾಹ್ನ 12ರಿಂದ 12.30ರ ನಡುವೆ ದೇವಸ್ವಂ ಮಂಡಳಿ ಅಧ್ಯಕ್ಷ ಪಿ.ಎಸ್.ಪ್ರಶಾಂತ್ ನೂತನ ಕೆರೆಗೆ ಶಂಕುಸ್ಥಾಪನೆ ನೆರವೇರಿಸಿದರು.
ತಂತ್ರಿ ಕಂಠಾರರ್ ರಾಜೀವ್ ಅವರ ಉಪಸ್ಥಿತಿಯಲ್ಲಿ ಸಮಾರಂಭ ನಡೆಯಿತು. ಸನ್ನಿಧಾನಂನಲ್ಲಿ ನಿರ್ಮಾಣವಾಗುತ್ತಿರುವ ಮೂರನೇ ಕೆರೆ ಇದಾಗಿದೆ. ಭಸ್ಮಕುಳವೆಂದು ಕರೆಯುವ ಇದನ್ನು ದೇವಾಲಯದ ಅಂಗವಾಗಿ ಪರಿಗಣಿಸಲಾಗಿರುವುದರಿಂದ, ತಂತ್ರಿಗಳ ಅನುಮತಿ ಮತ್ತು ಸೂಚನೆಗಳೊಂದಿಗೆ ಸ್ಥಳಾಂತರಿಸಲಾಗುತ್ತದೆ. ಭಸ್ಮಕೆರೆ ಮೂಲತಃ ಪ್ರಸ್ತುತ ಮೇಲ್ಸೇತುವೆಯ ಕೆಳಗೆ ಕುಂಭ ರಾಶಿಯಲ್ಲಿದೆ. ಆದರೆ ನಿರ್ಮಾಣ ಚಟುವಟಿಕೆಗಳಿಂದಾಗಿ 1987 ರಲ್ಲಿ ಅದನ್ನು ಈಗಿರುವ ಸ್ಥಳಕ್ಕೆ ಸ್ಥಳಾಂತರಿಸಲಾಗಿತ್ತು.
ಕೆರೆಗೆ ಕೊಳಚೆ ನೀರು ಹರಿದು ಬರುತ್ತಿದೆ ಎಂಬ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡಲು ದೇವಸ್ವಂ ಮಂಡಳಿ ಅದನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಮುಂದಿನ ದಿನದಿಂದ ಕೆರೆ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ. ಮುಂದಿನ ವೃಶ್ಚಿಕ ಮಾಸದ ವೇಳೆಗೆ ಕೆರೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ. ಕೆರೆಯ ಹೊರತಾಗಿ ಕಾನನ ಗಣೇಶನನ್ನು ಕೂಡ ಸ್ಥಾಪಿಸಲಾಗುತ್ತದೆ.