ನವದೆಹಲಿ: ಯಾವುದೇ ಹಿಂಸಾಚಾರ ಘಟನೆ ನಡೆದು ಆರು ಗಂಟೆಗಳ ಒಳಗೆ ಸಾಂಸ್ಥಿಕ ಪ್ರಥಮ ಮಾಹಿತಿ ವರದಿ(ಎಫ್‌ಐಆರ್) ದಾಖಲಿಸುವಂತೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಸೂಚಿಸಿದೆ.
ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ(DGHS) ಇಂದು ಹೊರಡಿಸಿದ ಜ್ಞಾಪನಾ ಪತ್ರದಲ್ಲಿ ಈ ನಿರ್ದೇಶನವನ್ನು ನೀಡಲಾಗಿದೆ.
ಕೋಲ್ಕತ್ತಾದ ಆರ್‌ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ಇತ್ತೀಚೆಗೆ 31 ವರ್ಷದ ವೈದ್ಯೆಯ ಮೇಲೆ ಅತ್ಯಾಚಾರ ಎಸಗಿ ಹತ್ಯೆ ನಡೆಸಿದ ಘಟನೆಗೆ ವ್ಯಾಪಕ ಆಕ್ರೇಶ ವ್ಯಕ್ತವಾಗುತ್ತಿದೆ ಮತ್ತು ವೈದ್ಯರು ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಘಟನೆಯಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಆರೋಗ್ಯ ಸೇವೆಗಳ ಮಹಾನಿರ್ದೇಶನಾಲಯ, ಕರ್ತವ್ಯದಲ್ಲಿರುವಾಗ ಯಾವುದೇ ಆರೋಗ್ಯ ಕಾರ್ಯಕರ್ತರ ಮೇಲೆ ಹಿಂಸಾಚಾರ ನಡೆದ ಸಂದರ್ಭದಲ್ಲಿ, ಘಟನೆ ನಡೆದು 6 ಗಂಟೆಗಳ ಒಳಗೆ ಸಾಂಸ್ಥಿಕ ಎಫ್‌ಐಆರ್ ದಾಖಲಿಸುವುದು ಸಂಸ್ಥೆಯ ಮುಖ್ಯಸ್ಥರ ಜವಾಬ್ದಾರಿಯಾಗಿರುತ್ತದೆ ಎಂದು ಹೇಳಿದೆ.
ಇತ್ತೀಚೆಗೆ, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿ ಮೇಲೆ ಹಿಂಸಾಚಾರ ಸಾಮಾನ್ಯವಾಗಿದೆ. ಹಲವಾರು ಆರೋಗ್ಯ ಕಾರ್ಯಕರ್ತರು ತಮ್ಮ ಕರ್ತವ್ಯದ ಅವಧಿಯಲ್ಲಿ ದೈಹಿಕ ಹಿಂಸೆಯನ್ನು ಅನುಭವಿಸುತ್ತಾರೆ. ಅನೇಕರು ಬೆದರಿಕೆ ಅಥವಾ ಮೌಖಿಕ ಆಕ್ರಮಣಕ್ಕೆ ಒಳಗಾಗುತ್ತಾರೆ. ಈ ಹೆಚ್ಚಿನ ಹಿಂಸಾಚಾರ ಪ್ರಕರಣಗಳಲ್ಲಿ ರೋಗಿಯು ಅಥವಾ ರೋಗಿಯ ಪರಿಚಾರಕರು ಮಾಡುತ್ತಾರೆ” ಎಂದು ಮೆಮೊರಾಂಡಮ್ ಹೇಳಿದೆ.