ವಾಷಿಂಗ್ಟನ್: 'ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿರುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ವಿರುದ್ಧ ವೈಯಕ್ತಿಕ ಟೀಕೆ ಮಾಡುವುದನ್ನು ನಿಲ್ಲಿಸುವುದಿಲ್ಲ. ಆಕೆಯನ್ನು ಟೀಕಿಸುವ ಅರ್ಹತೆ ನನಗಿದೆ' ಎಂದು ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗುರುವಾರ ಗುಡುಗಿದ್ದಾರೆ.
'ಹಣದುಬ್ಬರದಿಂದ ಹಿಡಿದು ವಲಸೆಯವರೆಗಿನ ಸಮಸ್ಯೆಗಳನ್ನು ಬೈಡನ್ ಆಡಳಿತವು ನಿಭಾಯಿಸಿರುವುದರ ಬಗ್ಗೆ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಕೋಪಗೊಂಡಿದ್ದೇನೆ. ಆಕೆ ದೇಶಕ್ಕಾಗಿ ಏನು ಮಾಡಿದ್ದಾಳೆ' ಎಂದು ಪ್ರಶ್ನಿಸಿದ್ದಾರೆ.
'ವೈಯಕ್ತಿಕ ಟೀಕೆಗಳು ಒಳ್ಳೆಯದ್ದು ಅಥವಾ ಕೆಟ್ಟದ್ದೇ ಆಗಿರಲಿ. ಆಕೆಯ ಬಗ್ಗೆ ಹೆಚ್ಚಿನ ಗೌರವ ನನಗಿಲ್ಲ. ಒಂದು ವೇಳೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಗೆದ್ದರೆ ಕೆಟ್ಟ ಅಧ್ಯಕ್ಷೆ ಎನಿಸಲಿದ್ದಾಳೆ. ಆದ್ದರಿಂದ ನಾವು ಗೆಲ್ಲುವುದು ಬಹಳ ಮುಖ್ಯ ಎಂದು ಭಾವಿಸಿದ್ದೇನೆ' ಎಂದು ನ್ಯೂಜೆರ್ಸಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ನಾನು ಚೆನ್ನಾಗಿರಲಿ ಎಂದು ಜನರು ಬಯಸುತ್ತಾರೆ. ಆದರೆ ಕಮಲಾ ಹ್ಯಾರಿಸ್, ಜೋ ಬೈಡನ್ ಹಾಗೂ ಡೆಮಾಕ್ರಟಿಕ್ ಪಕ್ಷದ ಇತರರು ನನ್ನನ್ನು ಜೈಲಿನಲ್ಲಿರಿಸಲು ಬಯಸುತ್ತಿದ್ದಾರೆ' ಎಂದು ಕಿಡಿಕಾರಿದರು.
'ಕಮಲಾ ವಿರುದ್ಧ ಹರಿಹಾಯುವುದರ ಬದಲು ನೀತಿಗಳ ಬಗ್ಗೆ ಗಮನಹರಿಸಿ' ಎಂದು ರಿಪಬ್ಲಿಕನ್ ಪಕ್ಷದ ಪ್ರಮುಖರು ಹಿಂದಿನ ವಾರವಷ್ಟೇ ಟ್ರಂಪ್‌ಗೆ ಸಲಹೆ ನೀಡಿದ್ದರು.