ನವದೆಹಲಿ: ಶ್ರೀಲಂಕಾ ನೌಕಾಪಡೆಯ ಹಡಗು ಹಾಗೂ ಭಾರತದ ಮೀನುಗಾರಿಕಾ ದೋಣಿಯೊಂದು ಡಿಕ್ಕಿ ಹೊಡೆದು, ಭಾರತದ ಒಬ್ಬ ಮೀನುಗಾರ ಮೃತಪಟ್ಟಿದ್ದಾರೆ. ಇನ್ನೊಬ್ಬರು ಕಾಣೆಯಾಗಿದ್ದಾರೆ. ಕಚ್ಚತೀವು ದ್ವೀಪದ ಐದು ನಾಟಿಕಲ್ ಮೈಲಿ ದೂರದಲ್ಲಿ ಗುರುವಾರ ಬೆಳಿಗ್ಗೆ ಘಟನೆ ನಡೆದಿದೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಭಾರತದಲ್ಲಿರುವ ಶ್ರೀಲಂಕಾದ ಹಂಗಾಮಿ ರಾಯಭಾರಿಯನ್ನು ಕರೆಸಿಕೊಂಡು ಘಟನೆಯ ಬಗ್ಗೆ ತೀವ್ರ ಪ್ರತಿಭಟನೆ ದಾಖಲಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಘಟನೆಯಲ್ಲಿ ಉಂಟಾದ ಜೀವ ಹಾನಿಗೆ ನಾವು ಆಘಾತ ಹಾಗೂ ಕಳವಳ ವ್ಯಕ್ತಪಡಿಸಿದ್ದೇವೆ. ಕೊಲಂಬೊದಲ್ಲಿರುವ ನಮ್ಮ ಹೈಕಮಿಷನರ್ ಕೂಡ ಶ್ರೀಲಂಕಾ ಸರ್ಕಾರದೊಂದಿಗೆ ಇದನ್ನು ಚರ್ಚಿಸಲಿದ್ದಾರೆ ಎಂದು ಸಚಿವಾಲಯ ಹೇಳಿದೆ.