ಕಾಸರಗೋಡು: ಜಿಲ್ಲೆಯಲ್ಲಿ ಜಲಪಕ್ಷಿ ಗೂಡುಕಟ್ಟುವ ಸ್ಥಳಗಳ ಸಮೀಕ್ಷೆ ಪೂರ್ಣಗೊಂಡಿದೆ. ಕಾಸರಗೋಡು ಸಾಮಾಜಿಕ ಅರಣ್ಯ ವಿಭಾಗ ಮತ್ತು ಮಲಬಾರ್ ಅವೇರ್ನೆಸ್ ಅಂಡ್ ರೆಸ್ಕ್ಯೂ ಸೆಂಟರ್ ಫಾರ್ ವೈಲ್ಡ್ ಲೈಫ್ (ಎಂ.ಎ.ಆರ್.ಸಿ.) ಈ ಸಮೀಕ್ಷೆಯನ್ನು ನಡೆಸಿದೆ.
ಹೊಸಂಗಡಿ, ಬಾಯಿಕಟ್ಟೆ, ಉಪ್ಪಳ, ಉಳಿಯತ್ತಟ್ಕ, ನೀರ್ಚಾಲು, ನೆಲ್ಲಿಕಟ್ಟೆ, ಬೋವಿಕ್ಕಾನ, ಮೂಲಕಂಡಂ, ಕಾಞಂಗಾಡ್, ಪಳ್ಳಿಕ್ಕೆರೆ, ತಾಯ್ಕಡಪ್ಪುರಂಗಳಲ್ಲಿ ಜಲಪಕ್ಷಿಗಳು ಗೂಡು ಕಟ್ಟಿರುವುದು ಸಮೀಕ್ಷೆಯ ವೇಳೆ ಕಂಡುಬಂದಿದೆ. ಜಿಲ್ಲೆಯಲ್ಲಿ ಕುಲಕೋಕ, ಪತಿರಕ್ಕೋಕ, ಪುಟ್ಟ ನೀರುಕಾಗೆ, ಕಿನ್ನರಿ ನೀರುಕಾಗೆಗಳ ಸಂಖ್ಯೆ ಹೆಚ್ಚಿದೆ. ಕಿನ್ನರಿ ನೀರುಕಾಗೆಗಳ ಸಂಖ್ಯೆ ಶೇ.200ರಷ್ಟು ಹೆಚ್ಚಳಗೊಂಡಿದೆ ಎಂದು ಸಮೀಕ್ಷೆ ತಿಳಿಸಿದೆ.
ಕಳೆದ ವರ್ಷ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಗೆ ಸಂಬಂಧಿಸಿ ರಸ್ತೆ ಬದಿಯ ಮರಗಳನ್ನು ಕಡಿದ ಸಂದರ್ಭದಲ್ಲಿ ಜಲಪಕ್ಷಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು. ಸಹಾಯಕ: ಅರಣ್ಯ ಸಂರಕ್ಷಣಾಧಿಕಾರಿ ಎ.ಶಜ್ನಾ ಕರೀಂ ಮತ್ತು ಡಾ.ರೋಶ್ ನಾಥ್ ರಮೇಶ್ ಮಾತನಾಡಿ, ಸಮೀಕ್ಷೆಯ ಫಲಿತಾಂಶಗಳು ಜಿಲ್ಲೆಯಲ್ಲಿ ಜಲಚರ ಪರಿಸರ ವ್ಯವಸ್ಥೆಯ ಆರೋಗ್ಯಕರ ಉಳಿವು ಖಚಿತಪಡಿಸುತ್ತದೆ ಎಂದು ಖಚಿತಪಡಿಸಿರುವರು.
ವಲಯ ಅರಣ್ಯಾಧಿಕಾರಿಗಳಾದ ಸೊಲೊಮನ್ ಟಿ.ಜಾರ್ಜ್, ಕೆ.ಗಿರೀಶ್, ಉಪ ವಲಯ ಅರಣ್ಯಾಧಿಕಾರಿ ಎನ್.ವಿ.ಸತ್ಯನ್, ತಾಹಿರ್ ಅಹಮದ್, ಪಕ್ಷಿ ನಿರೀಕ್ಷಕ ರಾಜು ಕಿದೂರು, ಟಿ.ಯು.ತ್ರಿನಿಶಾ ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ವಲಯ ಅರಣ್ಯಾಧಿಕಾರಿಗಳಾದ ಕೆ.ಕೆ.ಬಾಲಕೃಷ್ಣನ್, ಕೆ.ಆರ್.ವಿಜಯನಾಥ್, ಎಂ.ಸುಂದರನ್, ಎಂ. ಬಿಜು, ಬೀಟ್ ಅರಣ್ಯಾಧಿಕಾರಿ ಅಂಜು ಎಂ. ಜೆ ನೇತೃತ್ವ ವಹಿಸಿದ್ದರು.