HEALTH TIPS

ವಿನೇಶ್ ಫೋಗಟ್ ವಿಚಾರವಾಗಿ ರಾಜ್ಯಸಭೆಯಲ್ಲಿ ಗದ್ದಲ: ಸದನದಿಂದ ಹೊರನಡೆದ ಸಭಾಪತಿ!

 ವದೆಹಲಿ: ರಾಜ್ಯಸಭೆಯ ಸಭಾಪತಿ ಜಗದೀಪ್ ಧನಕರ್ ಮತ್ತು ವಿರೋಧ ಪಕ್ಷಗಳ ನಡುವಿನ ಸಂಬಂಧ ಚೆನ್ನಾಗಿಲ್ಲದಿರುವುದು ಸದನದಲ್ಲಿ ಗುರುವಾರ ಮತ್ತೆ ಎದ್ದುಕಂಡಿತು.

ವಿನೇಶ್ ಫೋಗಟ್ ಅವರು ಪ್ಯಾರಿಸ್ ಒಲಿಂಪಿಕ್ಸ್‌ನಿಂದ ಅನರ್ಹಗೊಂಡಿದ್ದರ ಬಗ್ಗೆ ರಾಜ್ಯಸಭೆಯಲ್ಲಿ ಚರ್ಚೆಗೆ ಅವಕಾಶ ನಿರಾಕರಿಸಲಾಯಿತು.

ಟಿಎಂಸಿ ನಾಯಕರು, ವಿರೋಧ ಪಕ್ಷಗಳ ಇತರ ಪ್ರಮುಖರ ಜೊತೆ ಧನಕರ್ ಅವರು ವಾಗ್ವಾದ ನಡೆಸಿದರು. ನಂತರ ಧನಕರ್ ಅವರು ಸದನದಿಂದ ಹೊರನಡೆದರು.

ಫೋಗಟ್ ಅವರನ್ನು ಅನರ್ಹಗೊಳಿಸಿದ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಲು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಂದಾದರು. ಆದರೆ, ಇದಕ್ಕೆ ಧನಕರ್ ಅವಕಾಶ ನೀಡಲಿಲ್ಲ. ಇದರಿಂದಾಗಿ ಧನಕರ್ ಹಾಗೂ ಟಿಎಂಸಿ ನಾಯಕ ಡೆರೆಕ್ ಒ'ಬ್ರಯಾನ್ ನಡುವೆ ಬಿರುಸಿನ ವಾಗ್ವಾದ ನಡೆಯಿತು.

'ಇದು ಮುಖ್ಯವಾದ ಸಂಗತಿ. ಇದು ಒಬ್ಬ ವ್ಯಕ್ತಿಗೆ ಸಂಬಂಧಿಸಿದ ವಿಷಯ ಅಲ್ಲ' ಎಂದು ಖರ್ಗೆ ಹೇಳಿದರು. ಅನರ್ಹತೆಯ 'ಹಿಂದೆ ಯಾರಿದ್ದಾರೆ' ಎಂಬುದನ್ನು ತಿಳಿದುಕೊಳ್ಳಬೇಕಿದೆ ಎಂದೂ ಹೇಳಿದರು. ಆದರೆ, ಈ ವಿಷಯ ಪ್ರಸ್ತಾಪಿಸಲು ಖರ್ಗೆ ಅವರಿಗೆ ಸಭಾಪತಿ ಅವಕಾಶ ನೀಡಲಿಲ್ಲ. ನಿಗದಿಯಂತೆ ಶೂನ್ಯ ವೇಳೆಯ ಕಲಾಪಗಳನ್ನು ನಡೆಸಲು ಮುಂದಾದರು.

ಈ ನಡುವೆ ಮಧ್ಯಪ್ರವೇಶಿಸಿ ಒಬ್ರಯಾನ್ ಮಾತನಾಡಲು ಮುಂದಾದರು. ಆದರೆ ಸದನದಲ್ಲಿ ನಡೆಯುತ್ತಿದ್ದ ಗದ್ದಲದ ಪರಿಣಾಮವಾಗಿ ಅವರು ಏನು ಹೇಳುತ್ತಿದ್ದಾರೆ ಎಂಬುದು ಕೇಳಿಸಲಿಲ್ಲ. 'ನೀವು ಸಭಾಪತಿಯನ್ನು ಉದ್ದೇಶಿಸಿ ಅರಚುತ್ತಿದ್ದೀರಿ. ನಿಮ್ಮ ನಡತೆಯು ಸದನದಲ್ಲಿ ಅತ್ಯಂತ ಕೊಳಕಾಗಿದೆ. ಇದನ್ನು ನಾನು ಖಂಡಿಸುತ್ತೇನೆ. ಮುಂದಿನ ಬಾರಿ ನಿಮ್ಮನ್ನು ಹೊರಹಾಕಬೇಕಾಗುತ್ತದೆ' ಎಂದು ಧನಕರ್ ಅವರು, ಒಬ್ರಯಾನ್ ಅವರನ್ನು ಉದ್ದೇಶಿಸಿ ಹೇಳಿದರು.

ಸದನದಲ್ಲಿ ಗದ್ದಲ ಮುಂದುವರಿದಾಗ, ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ನಡೆಸಿದರು. 'ಅವರು (ವಿರೋಧ ಪಕ್ಷಗಳು) ತಮ್ಮನ್ನೆಲ್ಲ ವಿವೇಕಿಗಳು ಎಂದು ಭಾವಿಸಿದ್ದಾರೆ. ತಮ್ಮ ಹೃದಯ ಮಾತ್ರವೇ ನೋವಿನಿಂದ ಮಿಡಿಯುತ್ತಿದೆ ಎಂದೂ ಅವರು ಭಾವಿಸಿದ್ದಾರೆ. ನಮ್ಮ ಹುಡುಗಿಯ ಕಾರಣಕ್ಕಾಗಿ ಇಡೀ ದೇಶ ನೋವಿನಲ್ಲಿದೆ. ರಾಷ್ಟ್ರಪತಿ, ಪ್ರಧಾನಿ, ನಾನು, ಇನ್ನೂ ಹಲವರಷ್ಟೆ ಅಲ್ಲ... ಇಡೀ ದೇಶ ನೋವು ಅನುಭವಿಸುತ್ತಿದೆ. ಇದನ್ನು ರಾಜಕೀಯಗೊಳಿಸುವುದು ಆ ಹುಡುಗಿಗೆ ತೋರುವ ಅತಿದೊಡ್ಡ ಅಗೌರವ. ಆಕೆ ಸಾಗಬೇಕಾದ ಹಾದಿ ಇನ್ನೂ ದೀರ್ಘವಾಗಿದೆ' ಎಂದು ಧನಕರ್ ಹೇಳಿದರು.

ಕಾಂಗ್ರೆಸ್ ಪಕ್ಷವು ಫೋಗಟ್ ಅನರ್ಹತೆ ಪ್ರಕರಣವನ್ನು ರಾಜಕೀಯಕ್ಕೆ ಬಳಸುತ್ತಿದೆ ಎಂದು ಸಭಾನಾಯಕ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಆರೋ‍ಪಿಸಿದರು. ಸಭಾಪತಿಯವರ ವಿಚಾರದಲ್ಲಿ ವಿರೋಧ ಪಕ್ಷಗಳ ನಡವಳಿಕೆಯನ್ನು ಖಂಡಿಸಿದರು. 'ಚರ್ಚಿಸಲು ವಿರೋಧ ಪಕ್ಷಗಳಿಗೆ ಗಟ್ಟಿ ವಿಷಯ ಇಲ್ಲವಾಗಿದೆ' ಎಂದು ಅವರು ಹೇಳಿದರು.

ನಡ್ಡಾ ಅವರು ಮಾತನಾಡಿದ ನಂತರ, ವಿರೋಧ ಪಕ್ಷಗಳ ನಡೆಯ ಬಗ್ಗೆ ಧನಕರ್ ಅವರು ನೋವು ತೋಡಿಕೊಂಡರು. ಕೆಲವು ಸಮಯದ ಮಟ್ಟಿಗೆ ತಮಗೆ ಸದನದಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ, ಸದನದಿಂದ ಅವರು ಹೊರನಡೆದರು.

ಸದನದಲ್ಲಿ ಅರಾಜಕತೆ ಸೃಷ್ಟಿಸಿ, ಸಭಾಪತಿ ಸ್ಥಾನದ ಘನತೆಗೆ ಅಗೌರವ ತೋರಿದ ವಿರೋಧ ಪಕ್ಷಗಳ ನಡೆಯು ಎಲ್ಲ ಮಿತಿಗಳನ್ನೂ ಮೀರಿದೆ ಎಂದು ಹೊರನಡೆಯುವ ಮೊದಲು ಧನಕರ್ ಅವರು ಹೇಳಿದರು.

'ಅವರು ಸವಾಲು ಹಾಕುತ್ತಿರುವುದು ನನಗಲ್ಲ. ಅವರು ಸದನದ ಸಭಾಪತಿ ಹುದ್ದೆಗೆ ಸವಾಲು ಹಾಕುತ್ತಿದ್ದಾರೆ. ಈ ಸ್ಥಾನದಲ್ಲಿ ಕುಳಿತಿರುವ ವ್ಯಕ್ತಿಯು ಅಸಮರ್ಥ ಎಂದು ಅವರು ಭಾವಿಸಿದ್ದಾರೆ' ಎಂದೂ ಧನಕರ್ ಹೇಳಿದರು. ಎಲ್ಲ ಬಗೆಯ ಪ್ರಯತ್ನವನ್ನು ತಾವು ನಡೆಸಿದರೂ, ಸದನದಿಂದ ತಮಗೆ ಅಪೇಕ್ಷಿತ ಮಟ್ಟದಲ್ಲಿ ಬೆಂಬಲ ಸಿಗಲಿಲ್ಲ ಎಂದು ಧನಕರ್ ಬೇಸರ ವ್ಯಕ್ತಪಡಿಸಿದರು.

ಕೆಲವು ಸಮಯದ ನಂತರ ಸದನಕ್ಕೆ ಮರಳಿದ ಧನಕರ್ ಅವರು, 'ನಾನು ಆತ್ಮಾವಲೋಕನದ ಉದ್ದೇಶದಿಂದ ಹೊರನಡೆದೆ. ಇಲ್ಲಿ ನಡೆದಿದ್ದು ಹಿಂದೆಂದೂ ಆಗಿರದಂಥದ್ದು. ಅದನ್ನು ಜೀರ್ಣಿಸಿಕೊಳ್ಳಲು ಆಗದು' ಎಂದರು.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries