ಚಂಡೀಗಢ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವನ್ನು ಬೆಂಬಲಿಸುವ ಉದ್ದೇಶದಿಂದ ಪ್ಯಾರಿಸ್‌ಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ನಿರ್ಧರಿಸಿದ್ದು, ಇದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
0
samarasasudhi
ಆಗಸ್ಟ್ 04, 2024
ಚಂಡೀಗಢ: ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಹಾಕಿ ತಂಡವನ್ನು ಬೆಂಬಲಿಸುವ ಉದ್ದೇಶದಿಂದ ಪ್ಯಾರಿಸ್‌ಗೆ ಭೇಟಿ ನೀಡಲು ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ನಿರ್ಧರಿಸಿದ್ದು, ಇದಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ನಿರಾಕರಿಸಿದೆ ಎಂದು ಅಧಿಕೃತ ಮೂಲವೊಂದು ತಿಳಿಸಿದೆ.
ಆಗಸ್ಟ್ ನಾಲ್ಕರಂದು ನಡೆಯಲಿರುವ ಹಾಕಿ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ತಂಡವನ್ನು ಬೆಂಬಲಿಸಲಿಕ್ಕಾಗಿ, ಆ.3ರಿಂದ 9ರವರೆಗೆ ಪ್ಯಾರಿಸ್‌ಗೆ ಭೇಟಿ ನೀಡಲು ಅನುಮತಿ ನೀಡುವಂತೆ ರಾಜತಾಂತ್ರಿಕ ಪಾಸ್‌ಪೋರ್ಟ್ ಹೊಂದಿರುವ ಮಾನ್ ಮನವಿ ಮಾಡಿದ್ದರು.
ಮಾನ್ ಅವರು ಝಡ್ ಪ್ಲಸ್ ಭದ್ರತೆ ಹೊಂದಿದ್ದಾರೆ. ಅಲ್ಪಾವಧಿಯಲ್ಲಿ ಇದನ್ನು ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಶುಕ್ರವಾರ ಸಂಜೆ ಮುಖ್ಯಮಂತ್ರಿ ಕಚೇರಿಗೆ ಈ ಕುರಿತಂತೆ ಮಾಹಿತಿ ನೀಡಲಾಗಿದೆ ಎಂದು ರಾಜ್ಯ ಸರ್ಕಾರದ ಮೂಲಗಳು ತಿಳಿಸಿವೆ.
ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತವಾಗಿದ್ದ ಆಸ್ಟ್ರೇಲಿಯಾ ತಂಡವನ್ನು ಭಾರತ ತಂಡವು ಮಣಿಸಿದೆ. 1972ರ ಬಳಿಕ ಐತಿಹಾಸಿಕ ಗೆಲುವು ದಾಖಲಿಸಿದೆ.
'ಆಸ್ಟ್ರೇಲಿಯಾವನ್ನು 3-2 ಗೋಲುಗಳಿಂದ ಮಣಿಸಿದ್ದು ಹೆಮ್ಮೆಯ ವಿಷಯ. ಮಹತ್ವದ ಪಂದ್ಯದಲ್ಲಿ ಎರಡು ಗೋಲು ಗಳಿಸುವ ಮೂಲಕ ಹರ್ಮನ್‌ಪ್ರಿತ್ ಸಿಂಗ್ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು' ಎಂದು ಮಾನ್ ಅಭಿನಂದನೆ ಸಲ್ಲಿಸಿದ್ದಾರೆ.