ತಿರುವನಂತಪುರ: ಕೇರಳದಲ್ಲಿ ಲೈಂಗಿಕ ಕಿರುಕುಳದ ಕರಾಳತೆ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಬಯಲಾಗುತ್ತಿದೆ.
ಇದೀಗ ನಟಿಯೊಬ್ಬರ ಆರೋಪದ ನಂತರ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ನೆರವು ಕೋಶದ ಅಧ್ಯಕ್ಷ ಮತ್ತು ವಕೀಲರ ಕಾಂಗ್ರೆಸ್ ರಾಜ್ಯ ಸಮಿತಿಯ ಅಧ್ಯಕ್ಷ ವಿ ಎಸ್ ಚಂದ್ರಶೇಖರನ್ ಅವರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಚಂದ್ರಶೇಖರನ್ ಅವರು ಕೆಪಿಸಿಸಿ ಅಧ್ಯಕ್ಷ ಕೆ.ಸುಧಾಕರನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಇತ್ತೀಚಿನ ವಿವಾದಗಳ ಹಿನ್ನೆಲೆಯಲ್ಲಿ ವಕೀಲ ವಿ ಎಸ್ ಚಂದ್ರಶೇಖರನ್ ನೈತಿಕ ಹೊಣೆ ಹೊತ್ತು ಕೆಪಿಸಿಸಿ ಕಾನೂನು ನೆರವು ಘಟಕದ ಅಧ್ಯಕ್ಷ ಮತ್ತು ವಕೀಲರ ಕಾಂಗ್ರೆಸ್ ರಾಜ್ಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಕೆಪಿಸಿಸಿ ಹೇಳಿದೆ.
ನಟಿಯೊಬ್ಬರಿಂದ ಆರೋಪ ಎದುರಿಸುತ್ತಿರುವ ಚಂದ್ರಶೇಖರನ್ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ಘೋಷಿಸಿದ ಒಂದು ದಿನದ ನಂತರ ಅವರು ರಾಜೀನಾಮೆ ನೀಡಿದ್ದಾರೆ.
ಇತ್ತೀಚಿನ ಫೇಸ್‌ಬುಕ್ ಪೋಸ್ಟ್‌ನಲ್ಲಿ, ನಟಿ ಕಾಂಗ್ರೆಸ್ ನಾಯಕನ ವಿರುದ್ಧ ಆರೋಪಗಳನ್ನು ಮಾಡಿದ್ದರು. ಅಲ್ಲದೇ ನಾಲ್ವರು ಮಲಯಾಳಂ ಚಲನಚಿತ್ರ ನಟರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಮಾಡಿದ್ದರು.