ಢಾಕಾ: 'ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಇಲ್ಲದಿದ್ದರೆ ಭಾರತ- ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಡುತ್ತದೆ ಎಂದು ಕೆಲ ಮಾಜಿ ರಾಜತಾಂತ್ರಿಕರು, ಅಧಿಕಾರಿಗಳು, ರಾಜಕಾರಣಿಗಳು ಮತ್ತು ಚಿಂತಕರ ಚಾವಡಿಯು ಭಾರತವನ್ನು ತಪ್ಪು ದಾರಿಗೆಳೆದಿದೆ' ಎಂದು ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ನಾಯಕ ಅಮಿರ್ ಖಸ್ರು ಮಹ್ಮದ್ ಚೌಧರಿ ಆರೋಪಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಸುರಕ್ಷತೆಯ ವಿಷಯ ಕುರಿತು ಭಾರತ ಪ್ರಸ್ತಾಪಿಸಿದ ಕೆಲ ದಿನಗಳ ಬಳಿಕ ಅವರು ಈ ಕುರಿತು ಪ್ರತಿಕ್ರಿಯಿಸಿದ್ದಾರೆ.
'ಬಾಂಗ್ಲಾವು ಭಾರತದ ಜತೆ ಉತ್ತಮ ಸಂಬಂಧ ಹೊಂದಲು ಬಯಸುತ್ತದೆ' ಎಂದು ಹೇಳಿದ ಖಾಲಿದಾ ಜಿಯಾ ನೇತೃತ್ವದ ಬಿಎನ್‌ಪಿ ನಾಯಕರಾದ ಅಮೀರ್, 'ದೇಶದ ಅಲ್ಪಸಂಖ್ಯಾತರ ವಿಷಯವು ನಮ್ಮ ಆಂತರಿಕ ವಿಷಯವಾಗಿದೆ. ಭಾರತದಲ್ಲಿ ಅಲ್ಪಸಂಖ್ಯಾತರ ಮೇಲೆ ಏನೇನಾಗುತ್ತಿದೆ ಎಂಬುದನ್ನು ನಾವು ಪ್ರಶ್ನಿಸಿಲ್ಲ. ಹೀಗಾಗಿ ನಮ್ಮ ಆಂತರಿಕ ವಿಷಯದಲ್ಲಿ ಅನ್ಯರ ಹಸ್ತಕ್ಷೇಪ ಸಲ್ಲ' ಎಂದಿದ್ದಾರೆ.
ಬಿಎನ್‌ಪಿಯ ವಿದೇಶಾಂಗ ವ್ಯವಹಾರ ಕೋಶದ ಮುಖ್ಯಸ್ಥರೂ ಆಗಿರುವ ಅವರು, 'ನವದೆಹಲಿಯು ಬಾಂಗ್ಲಾದೇಶದ ಜನರ ನಾಡಿಮಿಡಿತವನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದೆ. ಅದು ಬಾಂಗ್ಲಾದೇಶದಲ್ಲಿ ಒಂದು ಪಕ್ಷ ಅಥವಾ ಒಂದು ಕುಟುಂಬವನ್ನು ಮಾತ್ರ ಬೆಂಬಲಿಸುತ್ತಿದೆ' ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.