ವಯನಾಡು: ಭೂಕುಸಿತದ ಬಳಿಕ ಕರುಣಾಜನಕ ವಿಷಯಗಳ ತಾಣವಾಗಿ ಮಾರ್ಪಟ್ಟ ವಯನಾಡು ಕಳವಳಕಾರಿ ಸುದ್ದಿಗಳೊಂದಿಗೆ ಭೀತಿಗೊಳಪಡಿಸುತ್ತಿದೆ. ಇಂದು ತಮ್ಮ ಆತ್ಮೀಯರನ್ನು ಕಳೆದುಕೊಂಡವರ ಕಣ್ಣೀರು ಎದೆಯನ್ನು ಸುಡುತ್ತಿದೆ.
ಈ ನಡುವೆ ಪ್ರಜೀಶ್ ಎಂಬ ಯುವಕನ ವಿಧಿವಶ ವಯನಾಡು ಜನತೆಗೆ ನೋವು ತಂದಿದೆ.
ಭೂಕುಸಿತದ ವಿಷಯ ತಿಳಿದ ಪ್ರಜೀಶ್ ಪ್ರಾಣದ ಬಗ್ಗೆ ತಲೆಕೆಡಿಸಿಕೊಳ್ಳದೆ ಸ್ಥಳೀಯರನ್ನು ರಕ್ಷಿಸಲು ಸತತ ಚಟುವಟಿಕೆಯಲ್ಲಿದ್ದವರು. ಮೂರನೇ ಬಾರಿ ಜೀಪಿನೊಂದಿಗೆ ರಕ್ಷಣಾ ಚಟುವಟಿಕೆಗೆ ಧಾವಿಸುತ್ತಿದ್ದಾಗ ಪ್ರಜೀಶ್ ಪ್ರಾಣ ಕಳೆದುಕೊಂಡಿದ್ದಾರೆ. 2018ರಲ್ಲಿ ಪುತ್ತುಮಲದಲ್ಲಿ ಭೂಕುಸಿತ ಸಂಭವಿಸಿದಾಗಲೂ ಪ್ರಜೀಶ್ ಅಲ್ಲಿಗೂ ಓಡಿದ್ದರು ಎಂದು ಸ್ಥಳೀಯರು ಹೇಳುತ್ತಾರೆ.
ಜು.30ರ ರಾತ್ರಿ ಪ್ರಜೀಶ್ ಚುರಲ್ಮಲಾ ಗೆ ಧಾವಿಸಿ ತನ್ನ ತಾಯಿ, ಸಹೋದರ ಹಾಗೂ ಹಾಸಿಗೆ ಹಿಡಿದಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಮತ್ತೆ ಪರ್ವತವನ್ನು ಹತ್ತಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವಲ್ಲಿ ನಿರತರಾಗಿದ್ದರು. ರಕ್ಷಣೆಯ ತುರ್ತು ಮನಗಂಡು ಪ್ರಜೀಶ್ ಮೂರನೇ ಬಾರಿಗೆ ಪರ್ವತದ ತುದಿಗೆ ಹೋಗಲು ನಿರ್ಧರಿಸಿದರು. ಪರ್ವತದ ಮೇಲೆ ಸಾಕಷ್ಟು ಜನರು ಸಿಕ್ಕಿಬಿದ್ದಿದ್ದಾರೆ ಎಂದು ಅವರು ತಮ್ಮ ಸ್ನೇಹಿತರಿಗೆ ಹೇಳಿದರು. ನನ್ನನ್ನು ತಡೆಯಬೇಡಿ, ಹೇಗಾದರೂ ಹೋಗಿಯೇ ಹೋಗುತ್ತೇನೆ ಎಂದು ಜೀಪಿನೊಂದಿಗೆ ಪ್ರಜೀಶ ಹೊರಟು ಹೋಗಿದ್ದರು. ಜನರನ್ನು ಜೀಪಿನಲ್ಲಿ ಕರೆದೊಯ್ದರು.. ಆದರೆ ಸೇತುವೆ ತಲುಪುವ ಮುನ್ನವೇ ಜೀಪನ್ನು ಕೊಚ್ಚಿಕೊಂಡು ಬಂದ ಪ್ರವಾಹ ಅವರನ್ನು ಬಲಿತೆಗೆದುಕೊಂಡಿತು.
ಪ್ರಜೀಶ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳಲ್ಲಿ ಮುಂಡಕೈಯ ಸೂಪರ್ ಮ್ಯಾನ್ ಹಾಗೂ ಸೂಪರ್ ಹೀರೋ ಎಂದು ಹೇಳಲಾಗಿದೆ.