ಪೆರ್ಲ : 15 ಆಗಸ್ಟ್ , ಪೆರ್ಲ ನೇತಾಜಿ ಸಾರ್ವಜನಿಕ ಗ್ರಂಥಾಲಯ ಸ್ವಾತಂತ್ರ್ಯ ದಿನದ ಅಂಗವಾಗಿ ಆಯೋಜಿಸಿದ 'ರಾಷ್ಟ್ರೀಯ ಭಾವೈಕ್ಯತಾ ಕವಿ ಗೋಷ್ಠಿ' ಯನ್ನು ಮಂಜೇಶ್ವರ ತಾಲೂಕು ಲೈಬ್ರೇರಿ ಕೌನ್ಸಿಲ್ ಸದಸ್ಯ ರಾಮಚಂದ್ರ ಮೊಳಕ್ಕಾಲ್ ಉದ್ಘಾಟಿಸಿ 'ಗ್ರಂಥಾಲಯಗಳು ಸಮೃದ್ಧ ಸಮಾಜದ ವಿದ್ಯಾದೇಗುಲಗಳು. ಸಮತಭಾವವನ್ನು ಕಟ್ಟಿಕೊಡುವುದರೊಂದಿಗೆ ನಮ್ಮನ್ನು ಜ್ಞಾನಿಗಳನ್ನಾಗಿ ಮಾಡುತ್ತದೆ. ಈ ಮೂಲಕ ಶ್ರೇಷ್ಠ ಭಾರತವನ್ನು ಕಟ್ಟಲು ಸಾಧ್ಯವಿದೆ' ಎಂದು ನುಡಿದರು.
ಮುಖ್ಯ ಅತಿಥಿಯಾಗಿ ರಂಗ ನಿರ್ದೇಶಕ ಕೃಷ್ಣಪ್ಪ ಬಂಬಿಲ ಭಾಗವಹಿಸಿದ್ದಾರೆ. ಕವನ ವಾಚಿಸಿದ ಕವಿಗಳಾದ ನವ್ಯಾಶ್ರೀ ಸ್ವರ್ಗ - 'ನೈಜತೆ' ಆನಂದ ರೈ ಅಡ್ಕಸ್ಥಳ - 'ದೇಶ ಸೇವೆ' ಹಿತೇಶ್ ಕುಮಾರ್ ನೀರ್ಚಾಲ್ - 'ರಾಷ್ಟ್ರೀಯತೆ' ಸುಜಿತ್ ಕುಮಾರ್ ಬೇಕೂರು -'ಐಕ್ಯತೆ' ,ಸುಂದರ ಬಾರಡ್ಕ - 'ಅಂಬೇಡ್ಕರ್ - ಗಾಂಧೀಜಿ', ಬಾಲಕೃಷ್ಣ ಬೇರಿಕೆ - 'ಆಕ್ರಮಣ' , ಪ್ರಿಯಾ ಬಾಯಾರ್ - 'ಗಾಂಧಿ ತಾತ' ಕು.ಮನ್ವಿತ - 'ಪ್ರಕೃತಿ' ಸನ ಎಂ ಪಿ - 'ಭಾರತ ಸೈನ್ಯ' ರಿಷಾ ಎಸ್ - 'ಉತ್ಸವ' ರಾಮ ಪಟ್ಟಾಜೆ - 'ಪೊರಕೆ' ವನಜಾಕ್ಷಿ ಚಂಬ್ರಕಾನ - 'ಕೋಟೆ' ಹೀಗೆ ಒಂದು ಆಶಯದಲ್ಲಿ ವಿವಿಧ ದೃಷ್ಠಿಕೋನಗಳ ಕವಿತೆಗಳನ್ನು ಪ್ರಸ್ತುತ ಪಡಿದ್ದಾರೆ. ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಿದ್ದ ಬರಹಗಾರ ಕವಿಗಳಾದ ಶ್ರೀನಿವಾಸ ಪೆರಿಕ್ಕಾನರವರು 'ಸೂರ್ಯನಿಗೆ ಎದುರಾಗಿ ಯಾ ಬೆನ್ನು ಹಾಕಿ ನಿಂತು ಮನಸನ್ನು ದೃಶ್ಯದೊಳಗೆ ಲೀನಗೊಳಿಸಿದಾಗ ಪ್ರಕೃತಿಯ ಕುರಿತು ಕವಿತೆಗಳು ಮನಸ್ಸಲ್ಲಿ ದೃಶ್ಯಾವಿಷ್ಕಾರ ಹೊಂದುತ್ತವೆ. ಪದಗಳಿಂದ ಹೊಸ ಲೋಕವನ್ನು ಪಟಲದಲ್ಲಿ ಮೂಡಿಸುವ ಬರವಣಿಗೆಯು ಒಂದು ಚಮತ್ಕಾರವಾಗಿದೆ. ವಾಚ್ಯ ಮತ್ತು ಸೂಚ್ಯಗಳಿಂದ ಕೂಡಿಕೊಂಡು ವಿಷಯಕ್ಕೆ ಒತ್ತುನೀಡುವ ಕವಿತೆಗಳು ವಾಸ್ತವಿಕತೆಯನ್ನು ತೆರೆದಿಡುವಂತಿದ್ದರೆ ಉತ್ತಮ. ಆಶಯದ ಆಳದಲ್ಲಿ ಕವಿತೆಗಳೆಂಬ ಒಸರುಗಳನ್ನು ಸೃಷ್ಠಿಸಿದ ಕವಿಗಳ ಕವಿತೆಗಳು ಆಸ್ವಾಧನೆಗೆ ಮತ್ತು ಗ್ರಹಿಸುವಿಕೆಯಲ್ಲಿ ಯಶಸ್ಸಾದವು" ಎಂದು ಕವಿತೆಗಳನ್ನು ವಿಮರ್ಶಿಸುತ್ತಾ ಪ್ರಶಂಸೆಯ ಮಾತುಗಳಾನ್ನಾಡಿದರು.