ನವದೆಹಲಿ: ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದಿಸುವ ಕಂಪನಿಗಳು ಹೊರಹಾಕುವ ಕಲ್ಲಿದ್ದಲಿನ ತ್ಯಾಜ್ಯದಿಂದ ಸರ್ಕಾರದ ಬೊಕ್ಕಸಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ ಎಂಬ ಮಹಾ ಲೆಕ್ಕಪರಿಶೋಧಕ ಮತ್ತು ಮಹಾಲೇಖಪಾಲರ (ಸಿಎಜಿ) ನಿಲುವು ಒಂದು ಅಭಿಪ್ರಾಯವೇ ಹೊರತು, ಅದನ್ನು ಆಧರಿಸಿ ಕ್ರಿಮಿನಲ್ ವಿಚಾರಣೆ ನಡೆಸುವುದನ್ನು ಒಪ್ಪಲಾಗದು ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.
ಕಲ್ಲಿದ್ದಲು ಹಗರಣ ಪ್ರಕರಣದಲ್ಲಿ 2021ರಲ್ಲಿ ದೆಹಲಿ ಹೈಕೋರ್ಟ್ ನೀಡಿದ್ದ ತೀರ್ಪನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನ್ ಅಮಾನುಲ್ಲಾ ಅವರ ಪೀಠವು ರದ್ದುಗೊಳಿಸಿದೆ.
ಮೆಷರ್ಸ್ ಕರ್ನಾಟಕ ಎಮ್ಟಾ ಕೋಲ್ ಮೈನ್ಸ್ ಲಿಮಿಟೆಡ್ ಮತ್ತು ಎಮ್ಟಾ ಕೋಲ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಉಜ್ಜಲ್ ಕುಮಾರ್ ಉಪಾಧ್ಯ ಅವರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ಹಲವು ಅಪರಾಧಗಳನ್ನು ಹೊರಿಸಲಾಗಿತ್ತು.
ಕಕ್ಷಿದಾರರನ್ನು ನಿಯಂತ್ರಿಸುವ ಒಪ್ಪಂದಗಳ ಷರತ್ತುಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಮತ್ತು ಸಿಎಜಿ ಲೆಕ್ಕ ಪರಿಶೋಧನಾ ವರದಿಯಲ್ಲಿ ಮಾಡಲಾದ ಅವಲೋಕನಗಳನ್ನು ಅತಿಯಾಗಿ ಆಧರಿಸಿ ಸಿಬಿಐ ಅಪರಾಧವನ್ನು ಹೊರಿಸಿದೆ ಎಂದು ಪೀಠ ಹೇಳಿದೆ.
ಸಂವಿಧಾನದ 149ನೇ ವಿಧಿಯ ಪ್ರಕಾರ ಸಿಎಜಿ ವರದಿಯು ಸಂಸತ್ತಿನ ಪರಿಶೀಲನೆಗೆ ಒಳಪಟ್ಟಿರುತ್ತದೆ. ಈ ವರದಿಯ ಬಗ್ಗೆ ಸರ್ಕಾರ ತನ್ನ ಅಭಿಪ್ರಾಯ ನೀಡಬಹುದು ಎಂದೂ ಪೀಠ ತಿಳಿಸಿದೆ.
ಕರ್ನಾಟಕ ಮೂಲದ ಖಾಸಗಿ ಸಂಸ್ಥೆಯು ಮತ್ತೊಂದು ಸಂಸ್ಥೆಯ ಮೂಲಕ ಕಲ್ಲಿದ್ದಲು ತ್ಯಾಜ್ಯವನ್ನು ಅಕ್ರಮವಾಗಿ ಮಾರಾಟ ಮಾಡಿದೆ ಎಂಬ ಆರೋಪ ವ್ಯಕ್ತವಾಗಿತ್ತು.