ಢಾಕಾ: ಇಲ್ಲಿನ ಢಾಕೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮುದಾಯದವರನ್ನು ಭೇಟಿಯಾದ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, 'ನಮ್ಮ ಸರ್ಕಾರದ ಬಗ್ಗೆ ನಿರ್ಣಯಕ್ಕೆ ಬರುವ ಮೊದಲು ತಾಳ್ಮೆಯಿಂದ ವರ್ತಿಸಿ' ಎಂದು ಹೇಳಿದರು.
ಢಾಕಾ: ಇಲ್ಲಿನ ಢಾಕೇಶ್ವರಿ ದೇವಸ್ಥಾನದಲ್ಲಿ ಹಿಂದೂ ಸಮುದಾಯದವರನ್ನು ಭೇಟಿಯಾದ ಬಾಂಗ್ಲಾದೇಶದ ಮುಖ್ಯ ಸಲಹೆಗಾರ ಮೊಹಮ್ಮದ್ ಯೂನಸ್, 'ನಮ್ಮ ಸರ್ಕಾರದ ಬಗ್ಗೆ ನಿರ್ಣಯಕ್ಕೆ ಬರುವ ಮೊದಲು ತಾಳ್ಮೆಯಿಂದ ವರ್ತಿಸಿ' ಎಂದು ಹೇಳಿದರು.
ಮಾಜಿ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಬೆನ್ನಲ್ಲೇ ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲೆ ದಾಳಿಗಳು ಹೆಚ್ಚಿದ್ದು, ಧಾರ್ಮಿಕ ಕೇಂದ್ರಗಳು ಮತ್ತು ವ್ಯಾಪಾರ ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿತ್ತು.
ದೇವಸ್ಥಾನಕ್ಕೆ ಭೇಟಿ ನೀಡಿದ ಯೂನಸ್ ಅವರನ್ನು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ ಮುಖಂಡರು, ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮತ್ತು ಭಕ್ತಾದಿಗಳು ಸ್ವಾಗತಿಸಿದರು ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
'ಪ್ರಜಾಸತ್ತಾತ್ಮಕ ಆಶಯಗಳಲ್ಲಿ ನಮ್ಮನ್ನು ಮುಸ್ಲಿಮರು, ಹಿಂದೂಗಳು, ಬೌದ್ಧರು ಎಂದು ನೋಡದೆ, ಮನುಷ್ಯರಂತೆ ನೋಡಬೇಕು. ನಮ್ಮ ಹಕ್ಕುಗಳನ್ನು ಖಾತರಿಪಡಿಸಬೇಕು. ಹಕ್ಕುಗಳು ಎಲ್ಲರಿಗೂ ಸಮಾನವಾಗಿದೆ. ಸಾಂಸ್ಥಿಕ ವ್ಯವಸ್ಥೆಗಳಲ್ಲಿನ ಗೊಂದಲದಿಂದಾಗಿ ಸಮಸ್ಯೆಗಳು ಉದ್ಭವಿಸುತ್ತವೆ. ಸಾಂಸ್ಥಿಕ ವ್ಯವಸ್ಥೆಗಳನ್ನು ಮೊದಲು ಸರಿಪಡಿಸಿಕೊಳ್ಳಬೇಕಿದೆ' ಎಂದು ಯೂನಸ್ ತಿಳಿಸಿದರು.
ಯೂನಸ್ ಅವರೊಂದಿಗೆ ಕಾನೂನು ಸಲಹೆಗಾರ ಆಸಿಫ್ ನಜ್ರುಲ್ ಮತ್ತು ಧಾರ್ಮಿಕ ವ್ಯವಹಾರಗಳ ಸಲಹೆಗಾರ ಖಲೀದ್ ಹೂಸೈನ್ ಇದ್ದರು.
ಭೇಟಿಯ ವೇಳೆ ಹಿಂದೂ ಸಮುದಾಯದವರೆ ಜೊತೆ ಯೂನಸ್ ಸಂವಾದ ನಡೆಸಿದ್ದಾರೆ.
ಶೇಖ್ ಹಸೀನಾ ಸರ್ಕಾರ ಪತನದ ನಂತರ ಅಲ್ಪಸಂಖ್ಯಾತರ ಮೇಲೆ ಬಾಂಗ್ಲಾದ 52 ಜಿಲ್ಲೆಗಳಲ್ಲಿ ಸುಮಾರು 205 ಕಡೆ ದಾಳಿ ನಡೆದಿದೆ ಎಂದು ಬಾಂಗ್ಲಾದೇಶ ಹಿಂದೂ ಬೌದ್ಧ ಕ್ರಿಶ್ಚಿಯನ್ ಯೂನಿಟಿ ಕೌನ್ಸಿಲ್ ಮತ್ತು ಬಾಂಗ್ಲಾದೇಶ ಪೂಜಾ ಉದ್ಜಪನ್ ಪರಿಷತ್ ತಿಳಿಸಿವೆ.