ಮುಂಬೈ: ಏಷ್ಯಾದ ಅತಿ ದೊಡ್ಡ ಕೊಳಗೇರಿಗಳಲ್ಲಿ ಒಂದಾಗಿರುವ ಮುಂಬೈನ ಧಾರಾವಿಯನ್ನು ಅಭಿವೃದ್ಧಿ ಪಡಿಸುವ ಶತಕೋಟ್ಯಾಧಿಪತಿ ಗೌತಮ್ ಅದಾನಿಯವರ ಯೋಜನೆಗೆ ವಿಘ್ನ ಎದುರಾಗಿದೆ. ಕೊಳಗೇರಿ ಜನರಿಗೆ ಪುನರ್ವಸತಿ ಕಲ್ಪಿಸಲು ಅಗತ್ಯವಾದ ಜಾಗ ಸಿಗುತ್ತಿಲ್ಲ ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಧಾರಾವಿ ಅಭಿವೃದ್ಧಿಗೆ ಅದಾನಿ ಸಮೂಹ ಕಳೆದ ವರ್ಷ ₹ 51.92 ಸಾವಿರ ಕೋಟಿ ಮಿಲಿಯನ್ ಮೌಲ್ಯದ ಬಿಡ್ ಗೆದ್ದುಕೊಂಡಿತ್ತು. 594 ಎಕರೆ ವಿಶಾಲ ಈ ಪ್ರದೇಶದವನ್ನು ಆಧುನಿಕ ಸಿಟ್ ಹಬ್ ಅನ್ನಾಗಿ ಪರಿವರ್ತಿಸಲು ಮುಂದಾಗಿತ್ತು. ಇದಕ್ಕೆ ವಿರೋಧ ಪಕ್ಷಗಳಿಂದ ಭಾರಿ ವಿರೋಧ ಎದುರಾಗಿತ್ತು. ಈ ಬಿಡ್ ಪಡೆಯಲು ಸರ್ಕಾರ ಅದಾನಿ ಸಮೂಹಕ್ಕೆ ಸಹಾಯ ಮಾಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿದ್ದವು. ಆದರೆ ಇದನ್ನು ಅದಾನಿ ಸಮೂಹ ನಿರಾಕರಿಸಿದೆ.
2000ದ ಇಸವಿಗೆ ಮುಂಚೆ ಇಲ್ಲಿ ವಾಸವಿದ್ದವರಿಗೆ ಮಾತ್ರ ಮರು ಅಭಿವೃದ್ಧಿ ಯೋಜನೆಯಡಿ ಉಚಿತ ಮನೆ ಪಡೆಯಲು ಅರ್ಹರು. ಇದಕ್ಕೆ ಕನಿಷ್ಠ 580 ಎಕರೆ ಜಾಗದ ಅಗತ್ಯ ಇದೆ. ಈ ನಿಯಮದ ಪ್ರಕಾರ 7 ಲಕ್ಷ ಜನ ಹೊಸ ಮನೆ ಪಡೆಯಲು ಅನರ್ಹರಾಗಲಿದ್ದಾರೆ.
ಅನರ್ಹರಿಗೆ ಮನೆ ನಿರ್ಮಿಸಲು ಜಾಗ ನೀಡಿ ಎಂದು ಅದಾನಿ ಸಮೂಹ ವಿವಿಧ ಸರ್ಕಾರಿ ಸಂಸ್ಥೆಗಳಿಗೆ ಮನವಿ ಮಾಡಿತ್ತು. ಆದರೆ ಈವೆರೆಗೂ ಎಲ್ಲೂ ಲಭ್ಯವಾಗಿಲ್ಲ ಎಂದು ಧಾರಾವಿ ಮರು ಅಭಿವೃದ್ಧಿ ಪ್ರಾಧಿಕಾರದ ಮುಖ್ಯಸ್ಥ ಎಸ್‌ವಿಆರ್ ಶ್ರೀನಿವಾಸ್ ತಿಳಿಸಿದ್ದಾರೆ.
'ತಮ್ಮ ಬಳಿಕ ಇರುವ ಜಾಗದಲ್ಲಿ ಸರ್ಕಾರಿ ಸಂಸ್ಥೆಗಳು ತಮ್ಮದೇ ಯೋಜನೆಗಳನ್ನು ಹಾಕಿಕೊಂಡಿವೆ. ಅವರು ಅದನ್ನು ಹಂಚಿಕೊಳ್ಳಲು ಸಿದ್ಧರಿಲ್ಲ. ಮುಂಬೈನಲ್ಲಿ ಒಂದಿಂಚು ಜಾಗ ಪಡೆಯುವುದು ಭಾರಿ ಕಷ್ಟದ ಕೆಲಸ. ನಮಗೆ ಒಂದೇ ಒಂದು ಇಂಚು ಸ್ಥಳ ಸಿಕ್ಕಿಲ್ಲ' ಎಂದು ಅವರು ಹೇಳಿದ್ದಾರೆ.
'ಜಾಗದ ಅಲಭ್ಯತೆಯಿಂದಾಗಿ ಯೋಜನೆ ವಿಳಂಬವಾಗುತ್ತಿದ್ದು, ಜಮೀನು ಇಲ್ಲದೆ ಯೋಜನೆ ಮುಂದುವರಿಯಲು ಅಸಾಧ್ಯ. ಯೋಜನೆ ಸರಿಯಾದ ಸಮಯಕ್ಕೆ ಮುಗಿಯಲು ಸ್ಥಳ ಸಿಗುವುದು ಅನಿವಾರ್ಯ' ಎಂದು ಶ್ರೀನಿವಾಸ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ಬಯಸಿ ಅದಾನಿ ಸಮೂಹಕ್ಕೆ ಇ-ಮೇಲ್ ಮಾಡಿದರೂ, ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.