ತಿರುವನಂತಪುರಂ: ಭೂಕುಸಿತದಿಂದ ನೆಲೆ ಕಳೆದುಕೊಂಡಿರುವ ವಯನಾಡ್‌ನ ಚೂರಲ್‌ಮಲ ಹಾಗೂ ಮುಂಡಕ್ಕೈನ ಸಂತ್ರಸ್ತರಿಗೆ ಉಚಿತ ಪಡಿತರ ವಿತರಿಸುವುದಾಗಿ ಕೇರಳ ಸರ್ಕಾರ ಘೋಷಿಸಿದೆ.
ಮುಂಡಕ್ಕೈ ಹಾಗೂ ಚೂರಲ್‌ಮಲ ನಿವಾಸಿಗಳಿಗೆ ಆಗಸ್ಟ್ ತಿಂಗಳ ಪಡಿತರವನ್ನು ಉಚಿತವಾಗಿ ವಿತರಿಸಲಾಗುವುದು ಎಂದು ಕೇರಳ ಆಹಾರ ಹಾಗೂ ನಾಗರಿಕ ಸರಬರಾಜು ಸಚಿವ ಜಿ.ಆರ್ ಅನಿಲ್ ಹೇಳಿದ್ದಾರೆ.
ಸದ್ಯ ಅರ್ಹ ಕುಟುಂಬಗಳಿಗೆ ಮಾತ್ರ ಪಡಿತರ ಕೇಂದ್ರಗಳ ಮೂಲಕ ಉಚಿತ ಪಡಿತರ ನೀಡಲಾಗುತ್ತಿದೆ. ಆದರೆ ದುರಂತ ಪೀಡಿತ ಪ್ರದೇಶಗಳ ಎಲ್ಲರಿಗೂ ಉಚಿತ ಪಡಿತರ ವಿತರಿಸಲಾಗುವುದು ಎಂದು ಅವರು ಹೇಳಿದ್ದಾರೆ.
ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ 300 ದಾಟಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಮೃತದೇಹಗಳು ಇರಬಹುದು ಎಂದು ಬಲವಾಗಿ ಶಂಕಿಸಲಾಗುವ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಸರ್ಕಾರ ತಿಳಿಸಿದೆ.