ಕುಂಬಳೆ: ಪೂರ್ಣಗೊಂಡ ನಿರ್ಮಾಣ ಕಾಮಗಾರಿಯ ಭದ್ರತಾ ಠೇವಣಿ ವಾಪಸ್ ಪಡೆಯಲು ಗುತ್ತಿಗೆದಾರ ಬರೋಬ್ಬರಿ ಒಂಬತ್ತು ವರ್ಷ ಕಾಯಬೇಕಾಗಿಬಂದ ವಿದ್ಯಮಾನ ಬೆಳಕಿಗೆ ಬಂದಿದೆ. ರಾಜ್ಯ ಮಾನವ ಹಕ್ಕು ಆಯೋಗದ ಜ್ಯುಡಿಶಿಯಲ್ ಸದಸ್ಯ ಬೈಜುನಾಥ್ ಅವರ ನಿರ್ದೇಶನದ ಮೇರೆಗೆ ಗುತ್ತಿಗೆದಾರರ ಭದ್ರತಾ ಠೇವಣಿ ಮರಳಿ ಕೊಡಲು ಆದೇಶಿಸಲಾಗಿದೆ.
ಮೊಗ್ರಾಲ್ ಪುತ್ತೂರು ಪಂಚಾಯತಿ ವ್ಯಾಪ್ತಿಯ ಉಜ್ಜಿರ್ ಕೆರೆ ದುರಸ್ತಿಗೊಳಿಸಿದ ಗುತ್ತಿಗೆದಾರ ಬಿ.ಐ.ಅಬೂಬಕರ್ ಸಿದ್ದೀಕ್ ಅವರಿಗೆ ರೂ.ಒಂದು ಲಕ್ಷ ಭದ್ರತಾ ಠೇವಣಿ ಕೊನೆಗೂ ಹಿಂದೆ ದೊರಕಿದೆ.
2015ರ ಜೂನ್ 15 ರಂದು ಕಾಮಗಾರಿ ಪೂರ್ಣಗೊಂಡಿತ್ತು. ಕಳೆದ ಒಂಬತ್ತು ವರ್ಷಗಳಿಂದ ಗುತ್ತಿಗೆದಾರರು ಭದ್ರತಾ ಠೇವಣಿ ಪಡೆಯಲು ಕೋಝಿಕ್ಕೋಡ್ ನಲ್ಲಿರುವ ಸಣ್ಣ ನೀರಾವರಿ ಇಲಾಖೆ ಸೂಪರಿಂಟೆಂಡಿಂಗ್ ಎಂಜಿನಿಯರ್ ಕಚೇರಿಗೆ ಎಡತಾಕಿದ್ದರು.
ಘಟನೆಗೆ ಸಂಬಂಧಿಸಿದಂತೆ ಆಯೋಗವು ಸಣ್ಣ ನೀರಾವರಿ ಅಧೀಕ್ಷಕ ಅಭಿಯಂತರರಿಂದ ವರದಿ ಕೇಳಿತ್ತು. ವರದಿ ಪ್ರಕಾರ ಕೆರೆ ನವೀಕರಣದಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಆಧಾರದ ಮೇಲೆ ಮಿಂಚಿನ ತಪಾಸಣೆ ನಡೆಸಿ ಕೆರೆಯ ತಳಭಾಗವನ್ನು ಪರಿಶೀಲಿಸುವಂತೆ ನೀರಾವರಿ ಇಲಾಖೆಗೆ ಸೂಚಿಸಲಾಗಿತ್ತು.
ನೀರಿನ ಮಟ್ಟ ಕಡಿಮೆಯಾದಾಗ ಮಾತ್ರ ಸ್ಥಳ ಪರಿಶೀಲನೆ ಮಾಡಬಹುದು. ವರದಿ ಪ್ರಕಾರ ಕೆರೆಗೆ ನೀರು ಹರಿಸಿ ಪರಿಶೀಲನೆ ನಡೆಸಬೇಕಾದರೆ ರೂ.ಒಂದೂವರೆ ಲಕ್ಷ ಬೇಕಾಗಿ ಬರಲಿದೆ. ಸಾಮಾಜಿಕ ಪರಿಣಾಮಗಳು ಉಂಟಾಗಲಿದ್ದು, ವಿಜಿಲೆನ್ಸ್ ಪ್ರಕರಣದಲ್ಲಿ ನಿರ್ಧಾರವಾಗದೆ ಜಾಮೀನು ಹಣವನ್ನು ಹಿಂತಿರುಗಿಸಲಾಗುವುದಿಲ್ಲ ಎಂದು ವರದಿ ಹೇಳಿತ್ತು.
ಆದರೆ ಇದೊಂದು ಸಂಪೂರ್ಣ ಹಾಸ್ಯಾಸ್ಪದ ನಿಲುವು ಎಂದು ಮಾನವಹಕ್ಕು ಆಯೋಗ ಬೊಟ್ಟು ಮಾಡಿದೆ. ಕಾನೂನು ವ್ಯವಸ್ಥೆಗೆ ಸವಾಲೆಸೆಯುವ ಇಂತಹ ಕ್ರಮಗಳನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಮತ್ತು ಭದ್ರತಾ ಠೇವಣಿ ಹಿಂತಿರುಗಿಸುವಂತೆ ಆಯೋಗವು ಸೂಚಿಸಿತು ಮತ್ತು ಗುತ್ತಿಗೆದಾರರು ಹಣವನ್ನು ಕೊನೆಗೂ ಹಿಂಪÀಡೆದರು.