ಢಾಕಾ: ಬಾಂಗ್ಲಾದೇಶದಲ್ಲಿ ಶೇಕ್ ಹಸೀನಾ ಸರ್ಕಾರದ ಪತನದ ಬಳಿಕ ಅಸ್ಥಿರತೆ ತಲೆದೋರಿದ್ದು, ವ್ಯಾಪಾರದ ಮೇಲೂ ಪರಿಣಾಮ ಬೀರಿದೆ. ಬ್ಯಾಂಕ್‌ಗಳಿಂದ ಪ್ರತಿ ಖಾತೆದಾರರು ದಿನವೊಂದಕ್ಕೆ 2 ಲಕ್ಷ ಟಾಕಾ ನಗದು ಹಿಂಪಡೆಯಲು ಕೇಂದ್ರ ಬ್ಯಾಂಕ್ ಮಿತಿ ನಿಗದಿಪಡಿಸಿದ್ದು, ವ್ಯಾಪಾರದ ಮೇಲೂ ಪರಿಣಾಮ ಬೀರಿದೆ ಎಂದು ಮಾಧ್ಯಮವೊಂದು ಸೋಮವಾರ ವರದಿ ಮಾಡಿದೆ.
ಪ್ರತಿ ಖಾತೆದಾರರು ತಮ್ಮ ಖಾತೆಯಿಂದ ಗರಿಷ್ಠ 2 ಲಕ್ಷ ಟಾಕಾ ನಗದು ಹಿಂಪಡೆಯಬಹುದು ಎಂದು ಶನಿವಾರ ಮಿತಿ ನಿಗದಿಪಡಿಸಿದೆ. ಈ ಹಿಂದೆ 1 ಲಕ್ಷ ಟಾಕಾ ಮಾತ್ರ ಪಡೆಯಲು ಅವಕಾಶ ನೀಡಿತ್ತು.
ಮೀಸಲು ಕೋಟಾ ವಿರೋಧಿಸಿ ದೇಶದಾದ್ಯಂತ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಪೊಲೀಸರು ಇನ್ನೂ ಕೂಡ ಪೂರ್ಣ ಪ್ರಮಾಣದಲ್ಲಿ ಕರ್ತವ್ಯಕ್ಕೆ ಹಾಜರಾಗದ ಕಾರಣ ಕೇಂದ್ರ ಬ್ಯಾಂಕ್ ಭದ್ರತೆಯ ಕುರಿತು ಕಳವಳ ವ್ಯಕ್ತಪಡಿಸಿದೆ.
'ಈಗಿನ ಸ್ಥಿತಿ ಆಧರಿಸಿ, ನಗದು ಹಿಂಪಡೆಯುವ ಮಿತಿಯನ್ನು ನಿಗದಿಪಡಿಸಲಾಗಿದೆ' ಎಂದು ಮಧ್ಯಂತರ ಹಣಕಾಸು ಹಾಗೂ ಯೋಜನಾ ಸಚಿವ ಸಲೇಹುದ್ದೀನ್ ಅಹ್ಮದ್ ಭಾನುವಾರ ತಿಳಿಸಿದರು.
'ಮುಂದಿನ ವಾರವೂ ನಿರ್ಬಂಧ ಮುಂದುವರಿದರೆ, ನಿತ್ಯ ನಗದು ವಹಿವಾಟಿನ ವ್ಯಾಪಾರ ನಡೆಸುವ ವ್ಯಾಪಾರಿಗಳು ತೀವ್ರ ಸಂಕಷ್ಟ ಎದುರಿಸಲಿದ್ದಾರೆ' ಎಂದು ಡೈಲಿ ಸ್ಟಾರ್ ಪತ್ರಿಕೆ ವರದಿ ಮಾಡಿದೆ.