ಇತ್ತೀಚಿನ ದಿನಗಳಲ್ಲಿ ತೂಕ ಏರಿಕೆ ಅಥವಾ ಸ್ಥೂಲಕಾಯ ಸಮಸ್ಯೆ ಬಹುತೇಕರನ್ನು ಕಾಡುತ್ತಿದೆ, ಮಿತಿಮೀರಿ ತಿನ್ನುವುದು ತೂಕ ಏರಿಕೆಗೆ ಒಂದು ಕಾರಣವಾದರೆ ಅನಾರೋಗ್ಯಕರ ಜೀವನಶೈಲಿ, ಅತಿಯಾದ ಜಂಕ್ಫುಡ್ ಸೇವನೆ, ಒತ್ತಡದಾಯಕ ಜೀವನ ಹೀಗೆ ನಾನಾ ಕಾರಣಗಳಿಂದ ನಾವು ಸ್ಥೂಲಕಾಯದ ಸಮಸ್ಯೆಯಿಂದ ಬಳಲಲು ಆರಂಭಿಸುತ್ತೇವೆ.
ಆದರೆ ಇದ್ಯಾವುದೂ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇವುಗಳ ಸೇವನೆಯಿಂದ ಆರೋಗ್ಯಕರ ತೂಕ ಇಳಿಕೆ ಖಂಡಿತವಾಗಿಯೂ ಸಾಧ್ಯವಿಲ್ಲ.
ಆದರೆ ಮನೆಯಲ್ಲಿಯೇ ಇರುವ ಕೆಲವು ವಸ್ತುಗಳನ್ನು ಸರಿಯಾದ ಮಾರ್ಗದಿಂದ ಸೇವನೆ ಮಾಡುವ ಮೂಲಕ ಖಂಡಿತವಾಗಿಯೂ ತೂಕ ಇಳಿಕೆ ಮಾಡಿಕೊಳ್ಳಲು ಸಾಧ್ಯವಿದೆ. ತೂಕ ಇಳಿಕೆ ಮಾಡಲು ನಾವು ಮೆಂತೆಯ ಸಹಾಯವನ್ನು ಪಡೆಯಬಹುದಾಗಿದೆ. ನೋಡಲು ಒಂದು ಸಣ್ಣ ಕಾಳಾದರೂ ಸಹ ಮೆಂತೆಯು ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮೆಂತೆಕಾಳುಗಳನ್ನು ದಿನನಿತ್ಯ ಸೇವನೆ ಮಾಡುವ ಮೂಲಕ ತೂಕ ಇಳಿಕೆ ಮಾಡಿಕೊಳ್ಳಲು ಸಾಧ್ಯವಿದೆ.
ಹಾಗಾದರೆ ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಮೆಂತೆಯನ್ನು ಯಾವೆಲ್ಲ ರೀತಿಯಲ್ಲಿ ಬಳಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ.
ಮೆಂತೆ ನೀರು : ತೂಕ ಇಳಿಕೆ ಮಾಡುವ ಪ್ರಯಾಣದಲ್ಲಿ ಇರುವವರು ಸಾಮಾನ್ಯವಾಗಿ ಇದನ್ನು ಸೇವಿಸುತ್ತಾರೆ. ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಿಲ್ಲ. ರಾತ್ರಿ 1 ರಿಂದ 2 ಚಮಚ ಮೆಂತೆ ಕಾಳುಗಳನ್ನು ನೀರಿನಲ್ಲಿ ನೆನೆಸಿಟ್ಟರೆ ಸಾಕು. ಬೆಳಗ್ಗೆ ಎದ್ದು ಮೆಂತೆ ಕಾಳುಗಳನ್ನು ಸೋಸಿಕೊಂಡು ನೀರನ್ನು ಮಾತ್ರ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದು ನಿಮ್ಮ ದೇಹದಲ್ಲಿ ಸಕ್ಕರೆ ಅಂಶವನ್ನು ಸರಿದೂಗಿಸುವ ಜೊತೆಯಲ್ಲಿ ಜೀರ್ಣಕ್ರಿಯೆಯನ್ನು ಸುಧಾರಿಸುವುದು ಮಾತ್ರವಲ್ಲದೇ ನಿಮಗೆ ಪದೇ ಪದೇ ಏನಾದರೂ ತಿನ್ನಬೇಕು ಎನ್ನುವ ಕಡುಬಯಕೆಯನ್ನೂ ಕಡಿಮೆ ಮಾಡುತ್ತದೆ.
ದಿನನಿತ್ಯದ ಆಹಾರದಲ್ಲಿ ಮೆಂತೆ ಬಳಕೆ : ಮೆಂತೆಯನ್ನು ನೇರವಾಗಿ ಸೇವಿಸುವುದು ತುಸು ಕಷ್ಟದ ಕೆಲಸ. ಆದರೆ ಇದನ್ನು ನೀವು ಬೇರೆ ಬೇರೆ ವಿಧಾನಗಳಲ್ಲಿ ಖಂಡಿತವಾಗಿಯೂ ಸೇವನೆ ಮಾಡಬಹುದಾಗಿದೆ. ಬೆಳಗ್ಗೆ ತಿಂಡಿಗೆ ಮೆಂತೆ ದೋಸೆಯನ್ನು ಮಾಡಬಹುದು. ಅಂದರೆ ಅಕ್ಕಿಯ ಜೊತೆಯಲ್ಲಿ ಮೆಂತೆಯನ್ನೂ ನೆನೆಸಿ ದೋಸೆ ಹಿಟ್ಟು ತಯಾರಿಸಿ ನೀವು ದೋಸೆ ತಿನ್ನಬಹುದು. ಇನ್ನು ಸಾಂಬಾರುಗಳಲ್ಲಿಯೂ ಮೆಂತೆ ಬಳಕೆ ಆಗುತ್ತದೆ. ಈ ಮಾರ್ಗದ ಮೂಲಕ ನೀವು ಮೆಂತೆ ಸೇವನೆ ಮಾಡಬಹುದಾಗಿದೆ.
ಮೆಂತೆ ಚಟ್ನಿ : ಮೆಂತೆಯನ್ನು ನೇರವಾಗಿ ಸೇವಿಸುವ ವಿಧಾನವಿದು. ಇದಕ್ಕಾಗಿ ನೀವು ಹೆಚ್ಚೇನು ಮಾಡಬೇಕಾಗಿಲ್ಲ. ರಾತ್ರಿ ಮೆಂತೆಯನ್ನು ನೆನೆಸಿಟ್ಟು ಬೆಳಗ್ಗೆ ಇದನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿ, ಇದಕ್ಕೆ ಮೊಸರು ಹಾಗೂ ಉಪ್ಪನ್ನು ಸೇರಿಸಿ ನೀವು ಇದನ್ನು ಸೇವನೆ ಮಾಡಬಹುದಾಗಿದೆ. ಹಾಗೆಯೇ ನೇರವಾಗಿ ತಿನ್ನಲು ಸಾಧ್ಯವಿಲ್ಲ ಎಂದಾದರೆ ಬೆಳಗ್ಗೆ ದೋಸೆ ಅಥವಾ ಇಡ್ಲಿಯ ಜೊತೆಯಲ್ಲಿ ಚಟ್ನಿಯ ರೂಪದಲ್ಲಿ ಸೇವಿಸಬಹುದು.
ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿದೆ. ಇದು ಮೆಂತೆ ಕಾಳುಗಳಿಗೆ ಹೋಲಿಕೆಯಾಗುತ್ತದೆ.ಇವುಗಳು ಗಾತ್ರದಲ್ಲಿ ಚಿಕ್ಕದಾಗಿದ್ದರೂ ರುಚಿಯ ವಿಚಾರದಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡದೇ ಇದ್ದರೂ ಸಹ ಆರ್ಯುವೇದದ ಅಡಿಯಲ್ಲಿ ಸಾಕಷ್ಟು ಮಹತ್ವವನ್ನು ಹೊಂದಿದೆ. ಯಕೃತ್ತಿನ ಆರೋಗ್ಯ, ಹೃದಯದ ಆರೋಗ್ಯ, ಮಧುಮೇಹಿಗಳ ಆರೋಗ್ಯ, ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರ ಆರೋಗ್ಯ ಹೀಗೆ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ಅನೇಕರಿಗೆ ಮೆಂತೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಇವುಗಳಲ್ಲಿ ಆಂಟಿ ಆಕ್ಸಿಡಂಟ್ ಗುಣಗಳು ಇರುವುದರಿಂದ ಕೇವಲ ಈ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರವಲ್ಲದೇ ಯಾರು ಬೇಕಿದ್ದರೂ ಇದನ್ನು ಸೇವಿಸಿದರೆ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯುವುದಂತೂ ನಿಜ.