ಭೋಪಾಲ್: ಮಧ್ಯ ಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ(ಕೆಎನ್‌ಪಿ) ನಮೀಬಿಯಾದಿಂದ ತಂದ ಚೀತಾಗಳ ಸಾವಿನ ಸರಣಿ ಮುಂದುವರೆದಿದ್ದು, ಮಂಗಳವಾರ ಬೆಳಗ್ಗೆ ಗಂಡು ಚೀತಾ ಪವನ್ ನೀರಿನಲ್ಲಿ ಮುಳಗಿ ಮೃತಪಟ್ಟಿದೆ. ಇದರೊಂದಿಗೆ ಮಾರ್ಚ್ 2023 ರಿಂದ KNP ಯಲ್ಲಿ ಸಾವನ್ನಪ್ಪಿದ ಎಂಟನೇ ಆಫ್ರಿಕನ್ ಚಿರತೆಯಾಗಿದೆ.
ಮಂಗಳವಾರ ಬೆಳಗ್ಗೆ ನಾಲಾ ಅಂಚಿನಲ್ಲಿ ಚಿರತೆಯೊಂದು ಮೃತಪಟ್ಟಿರುವುದು ಪತ್ತೆಯಾಗಿದೆ. ಈ ಚೀತಾ ನೀರಿನಲ್ಲಿ ಮುಳುಗಿ ಮೃತಪಟ್ಟಿದೆ ಎಂದು ಶಂಕಿಸಲಾಗಿದೆ.
ರಾಜ್ಯ ಅರಣ್ಯ ಇಲಾಖೆ ಬಿಡುಗಡೆ ಮಾಡಿದ ಅಧಿಕೃತ ಹೇಳಿಕೆಯ ಪ್ರಕಾರ, ಮಂಗಳವಾರ ಬೆಳಗ್ಗೆ 10.30 ರ ಸುಮಾರಿಗೆ ನಮೀಬಿಯಾದ ಗಂಡು ಚಿರತೆ ಪವನ್ ಯಾವುದೇ ಚಲನವಲನವಿಲ್ಲದೆ ಪೊದೆಗಳ ನಡುವೆ ನಾಲಾ ಅಂಚಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಮಳೆಯಿಂದಾಗಿ ನಾಲಾ ತುಂಬಿ ಹರಿಯುತ್ತಿದೆ.
ತಕ್ಷಣ ಪಶುವೈದ್ಯರಿಗೆ ಮಾಹಿತಿ ನೀಡಲಾಗಿದ್ದು, ಸೂಕ್ಷ್ಮವಾಗಿ ಪರಿಶೀಲಿಸಿದಾಗ, ತಲೆ ಸೇರಿದಂತೆ ದೇಹದ ಮುಂಭಾಗದ ಅರ್ಧ ಭಾಗವು ನೀರಿನೊಳಗೆ ಇರುವುದು ಕಂಡುಬಂದಿದೆ ಮತ್ತು ದೇಹದ ಮೇಲೆ ಎಲ್ಲಿಯೂ ಗಾಯಗಳು ಕಂಡುಬಂದಿಲ್ಲ. ಹೀಗಾಗಿ ಚೀತಾ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಬಳಿಕವೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ.
ಉಳಿದಿರುವ 13 ನಮೀಬಿಯಾ ಮತ್ತು ದಕ್ಷಿಣ ಆಫ್ರಿಕಾದ ಚೀತಾಗಳಲ್ಲಿ ಪವನ್ ಏಕೈಕ ವಯಸ್ಕ ಚಿರತೆಯಾಗಿದ್ದು, ಕಳೆದ 7-8 ತಿಂಗಳುಗಳಿಂದ ಅರಣ್ಯಕ್ಕೆ ಬಿಡಲಾಗಿತ್ತು.