ಕೋಲ್ಕತ್ತ: ಕೋಲ್ಕತ್ತದ ವೈದ್ಯಕೀಯ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ನಡೆದ ಸರ್ಕಾರಿ ಆರ್.ಜೆ. ಕರ್ ಆಸ್ಪತ್ರೆಯಲ್ಲಿ ವೈದ್ಯೆಯ ಮೃತದೇಹ ಸಿಕ್ಕಿದ್ದ ಸ್ಥಳವನ್ನು ಅಪರಿಚಿತ ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ.
ಬುಧವಾರ ಮಧ್ಯರಾತ್ರಿ ಆಸ್ಪತ್ರೆಯನ್ನು ಪ್ರವೇಶಿಸಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ವರದಿ ತಿಳಿಸಿದೆ.
ಪ್ರತಿಭಟನಾಕಾರರ ಸೋಗಿನಲ್ಲಿ ಸುಮಾರು 40 ಮಂದಿಯ ಗುಂಪು ಆಸ್ಪತ್ರೆಯ ಆವರಣ ಪ್ರವೇಶಿಸಿ ಮೃತದೇಹ ಸಿಕ್ಕಿದ್ದ ಸ್ಥಳವನ್ನು ಧ್ವಂಸಗೊಳಿಸಿದ್ದಾರೆ. ಅಲ್ಲದೆ, ಅವರನ್ನು ತಡೆಯಲು ಅಶ್ರುವಾಯು ಪ್ರಯೋಗಿಸುತ್ತಿದ್ದ ಪೊಲೀಸ್ ಸಿಬ್ಬಂದಿ ಮೇಲೂ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳದಲ್ಲಿದ್ದ ಪೊಲೀಸ್ ವಾಹನ ಮತ್ತು ಎರಡು ದ್ವಿಚಕ್ರ ವಾಹನಗಳು ಸಹ ಹಾನಿಗೊಳಗಾಗಿವೆ.
ಈ ಹಿಂಸಾಚಾರದಲ್ಲಿ ಕೆಲ ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
'ಘಟನೆ ಬಳಿಕ ಆಸ್ಪತ್ರೆಯ ಹೊರಗೆ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿ ನಿಭಾಯಿಸಲು ಸೂಚಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ಧಾರೆ.
ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೋಲ್ಕತ್ತ ಪೊಲೀಸ್ ಕಮೀಷನರ್ ವಿನೀತ್ ಗೋಯಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಸಂಬಂದ ಕಮೀಷನರ್ ಜೊತೆ ಮಾತನಾಡಿದ್ದು, ಕೃತ್ಯದಲ್ಲಿ ಭಾಗಿಯಾದವರನ್ನು 24 ಗಂಟೆಗಳೊಳಗಾಗಿ ಬಂಧಿಸಿ ಕಾನೂನಿನ ಚೌಕಟ್ಟಿನೊಳಗೆ ತರಲು ಸೂಚಿಸಲಾಗಿದೆ ಎಂದು ಸಂಸದ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ.
ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕಳುಹಿಸಿದ್ದ ಗೂಂಡಾಗಳೇ ಈ ಕೃತ್ಯ ಎಸಗಿದ್ದಾರೆ ಎಂದು ಬಿಜೆಪಿ ನಾಯಕ ಸುವೇಂದು ಅಧಿಕಾರಿ ದೂರಿದ್ಧಾರೆ.