ನವದೆಹಲಿ: ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಂಘರ್ಷ ಮತ್ತು ಪರಿಹಾರ ಸಾಧ್ಯತೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮಂಗಳವಾರ ಮಾತನಾಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಇಂದು ಮಾತನಾಡಿದ್ದು, ಉಕ್ರೇನ್ ಭೇಟಿ ವೇಳೆ ನಡೆಸಿದ ರಷ್ಯಾ-ಉಕ್ರೇನ್ ಸಂಘರ್ಷದ ಅವಲೋಕನ, ದೃಷ್ಟಿಕೋನದ ಬಗ್ಗೆ ಮಾಹಿತಿಯನ್ನು ಹಂಚಿಕೊಳ್ಳಲಾಯಿತು. ಈ ಹಿಂದೆ ಹೇಳಿದಂತೆ ಸಂಘರ್ಘದ ಅಂತ್ಯಕ್ಕೆ ಶಾಂತಿಯುತ ಪರಿಹಾರ ಬೆಂಬಲಿಸಲು ಭಾರತ ಬದ್ಧವಾಗಿದೆ ಎಂದು ಪುನರುಚ್ಚರಿಸಿರುವುದಾಗಿ ಬರೆದುಕೊಂಡಿದ್ದಾರೆ.
ಇತ್ತೀಚೆಗಷ್ಟೇ ಉಕ್ರೇನ್‌ನಿಂದ ಮರಳಿದ ಪ್ರಧಾನಿ ಮೋದಿ, ಶಾಂತಿಯ ಸಂದೇಶದೊಂದಿಗೆ ಅಲ್ಲಿಗೆ ಹೋಗಿರುವುದಾಗಿ ಹೇಳಿದ್ದರು. ಸೋಮವಾರ ಯುಎಸ್ ಅಧ್ಯಕ್ಷ ಜೋ ಬೈಡನ್ ಅವರೊಂದಿಗೆ ಮಾತನಾಡಿದ್ದ ಪ್ರಧಾನಿ ಮೋದಿ, ಫೆಬ್ರವರಿ 24, 2022ರಲ್ಲಿ ಆರಂಭವಾದ ಸಂಘರ್ಷ ಶೀಘ್ರದಲ್ಲಿಯೇ ಆರಂಭವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಮಧ್ಯೆ ಕಳೆದ ತಿಂಗಳು 22 ನೇ ಭಾರತ-ರಷ್ಯಾ ದ್ವಿಪಕ್ಷೀಯ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದನ್ನು ಮೋದಿ ನೆನಪಿಸಿಕೊಂಡಿದ್ದು, ಮಾತುಕತೆ ಮತ್ತು ರಾಜತಾಂತ್ರಿಕತೆಯ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದಾರೆ. ಜೊತೆಗೆ ಸಂಘರ್ಷದ ಅಂತ್ಯಕ್ಕೆ ಸ್ಥಿರ ಮತ್ತು ಶಾಂತಿಯುತ ಪರಿಹಾರದ ಮಹತ್ವವನ್ನು ತಿಳಿಸಿದ್ದಾರೆ. ಸಂಘರ್ಷವನ್ನು ಹೇಗೆ ಪರಿಹರಿಸಲು ರಷ್ಯಾ ಉದ್ದೇಶಿಸಿದೆ ಎಂದು ಅಧ್ಯಕ್ಷ ಪುಟಿನ್ ಪ್ರಧಾನಿ ಮೋದಿಗೆ ತಿಳಿಸಿದ್ದಾರೆ ಎನ್ನಲಾಗಿದೆ.
ಈ ವರ್ಷದ ಅಕ್ಟೋಬರ್‌ನಲ್ಲಿ ಕಜಾನ್‌ನಲ್ಲಿ ನಡೆಯಲಿರುವ ಮುಂಬರುವ ಬ್ರಿಕ್ಸ್ ಶೃಂಗಸಭೆಯ ಕುರಿತು ಪುಟಿನ್ ಮಾತನಾಡಿದ್ದಾರೆ. ಪ್ರಧಾನಿ ಮೋದಿ ಇದರಲ್ಲಿ ಭಾಗವಹಿಸಲಿದ್ದಾರೆ. ಈ ವರ್ಷದ ಜುಲೈನಲ್ಲಿ ಮಾಸ್ಕೋಗೆ ಪ್ರಧಾನಿ ಮೋದಿಯವರ ಭೇಟಿಯ ಸಂದರ್ಭದಲ್ಲಿ ಮಾತನಾಡಲಾದ ವ್ಯಾಪಾರ ಮತ್ತು ಆರ್ಥಿಕ ಕ್ಷೇತ್ರದಲ್ಲಿನ ಒಪ್ಪಂದಗಳ ಕುರಿತು ಉಭಯ ನಾಯಕರು ಚರ್ಚಿಸಿದ್ದಾರೆ.