ಬೀಜಿಂಗ್: ವಿವಾದಿತ ದಕ್ಷಿಣ ಚೀನಾ ಸಮುದ್ರದ ಕಡಿಮೆ ಆಳದಲ್ಲಿ ಜಗತ್ತಿನ ಅತಿ ದೊಡ್ಡ ನೈಸರ್ಗಿಕ ಅನಿಲ ನಿಕ್ಷೇಪ ಪತ್ತೆ ಮಾಡಲಾಗಿದೆ ಎಂದು ಚೀನಾ ಹೇಳಿದೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶ ವಿಚಾರವಾಗಿ ಚೀನಾ ಮತ್ತು ಇತರ ದೇಶಗಳ ನಡುವೆ ಈಗಾಗಲೇ ರಾಜತಾಂತ್ರಿಕ ಮತ್ತು ಸೇನೆ ಮಟ್ಟದಲ್ಲಿ ಸಂಘರ್ಷ ನಡೆಯುತ್ತಿದೆ.
'ಲಿಂಗ್‌ಶುಯಿ 36-1' ಎಂದು ಗುರುತಿಸಲಾಗುವ ಈ ಪ್ರದೇಶದಲ್ಲಿ 10 ಸಾವಿರ ಘನ ಮೀಟರ್‌ಗಳಷ್ಟು ಅನಿಲ ಪತ್ತೆಯಾಗಿದೆ ಎಂದು ಚೀನಾದ 'ನ್ಯಾಷನಲ್ ಆಫ್‌ಶೋರ್ ಆಯಿಲ್ ಕೋ-ಆಪರೇಷನ್' (ಸಿಎನ್‌ಒಒಸಿ) ಎಂಬ ಸಂಸ್ಥೆ ಬುಧವಾರ ಘೋಷಿಸಿದೆ.
ಚೀನಾದ ಹೈನನ್ ಪ್ರಾಂತ್ಯದ ಆಗ್ನೇಯ ಭಾಗದ ಸಮುದ್ರದಲ್ಲಿ ಈ ನಿಕ್ಷೇಪ ಪತ್ತೆಯಾಗಿದೆ ಎಂದು ಸಿಎನ್‌ಒಒಸಿ ತಿಳಿಸಿದೆ. ಆದರೆ, ಈ ಅನಿಲ ನಿಕ್ಷೇಪ ಇರುವ ಪ್ರದೇಶವು ವಿವಾದಿತ ದಕ್ಷಿಣ ಚೀನಾ ಸಮುದ್ರ ವ್ಯಾಪ್ತಿಯೊಳಗೆ ಇದೆಯೋ ಅಥವಾ ಇಲ್ಲವೋ ಎಂಬ ಬಗ್ಗೆ ಅದು ಯಾವುದೇ ಮಾಹಿತಿ ನೀಡಿಲ್ಲ.
ಜಟಾಪಟಿ: ದಕ್ಷಿಣ ಚೀನಾ ಸಮುದ್ರ (ಎಸ್‌ಸಿಎಸ್) ಪ್ರದೇಶ ವಿಚಾರವಾಗಿ ಹಲವು ದೇಶಗಳು ಚೀನಾದೊಂದಿಗೆ ಸಂಘರ್ಷ ನಡೆಸುತ್ತಲೇ ಇವೆ. ಇದು ತನಗೆ ಸೇರಿದ್ದು ಎಂದು ಹೇಳುತ್ತಲೇ ಇರುವ ಚೀನಾ, ಈ ಪ್ರದೇಶದಲ್ಲಿ ತನ್ನ ಸೇನಾ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ.
ಚೀನಾ ವಾದವನ್ನು ವಿರೋಧಿಸುತ್ತಿರುವ, ಫಿಲಿಪ್ಪೀನ್ಸ್, ವಿಯೆಟ್ನಾಂ, ಮಲೇಷ್ಯಾ, ಬ್ರೂನಿ, ತೈವಾನ್ ದೇಶಗಳು, ಎಸ್‌ಸಿಎಸ್ ಮೇಲೆ ತಮಗೂ ಹಕ್ಕಿದೆ ಎನ್ನುತ್ತವೆ. ಅಮೆರಿಕ, ಐರೋಪ್ಯ ಒಕ್ಕೂಟ, ಜಪಾನ್ ಹಾಗೂ ಇತರ ಮಿತ್ರರಾಷ್ಟ್ರಗಳು ಈ ಸಣ್ಣ ದೇಶಗಳ ಬೆಂಬಲಕ್ಕೆ ನಿಂತಿವೆ.