ಢಾಕಾ: ಬಾಂಗ್ಲಾದೇಶದಲ್ಲಿ ಇತ್ತೀಚೆಗೆ ತಿಂಗಳುಗಳ ಕಾಲ ನಡೆದ ಸರ್ಕಾರ ವಿರೋಧಿ ಪ್ರತಿಭಟನೆಯಿಂದಾಗಿ ರಾಜಧಾನಿಯಲ್ಲಿರುವ ಆತಿಥ್ಯ ವಲಯವು ನಷ್ಟದಲ್ಲಿದೆ. ಹಲವು ಐಷಾರಾಮಿ ಮತ್ತು 'ಎಕಾನಮಿ' ಹೋಟೆಲ್‌ಗಳ ರೂಂಗಳು ಗ್ರಾಹಕರಿಲ್ಲದೆ ಬಿಕೋ ಎನ್ನುತ್ತಿವೆ.
ಢಾಕಾವು ಬಾಂಗ್ಲಾದೇಶದ ರಾಜಕೀಯ ಮತ್ತು ಆರ್ಥಿಕ ರಾಜಧಾನಿ.
'ದೇಶದಲ್ಲಿ ಉಂಟಾದ ಬಿಕ್ಕಟ್ಟು ಹೋಟೆಲ್ ಉದ್ಯಮದ ಮೇಲೆ ಜುಲೈನಲ್ಲಿ ಭಾರಿ ಪರಿಣಾಮ ಬೀರಿತ್ತು. ಸಾವಿರಾರು ಜನರು ತಮ್ಮ ಬುಕ್ಕಿಂಗ್ ರದ್ದು ಮಾಡಿದ್ದು, ಬಹುದೊಡ್ಡ ನಷ್ಟ ಉಂಟುಮಾಡಿತು' ಎಂದು ಹಲವು ಹೋಟೆಲ್‌ಗಳ ಹಿರಿಯ ವ್ಯವಸ್ಥಾಪಕರು ಹೇಳಿದ್ದಾರೆ.
'ಸದ್ಯ ಹೋಟೆಲ್ ಉದ್ಯಮದ ಸ್ಥಿತಿ ಸುಧಾರಿಸುತ್ತಿದೆ. ಆದರೆ ಸಹಜ ಸ್ಥಿತಿಗೆ ಮತ್ತೆ ಬರಲು ಇನ್ನಷ್ಟು ಸಮಯ ಬೇಕಾಗಬಹುದು. ಹಲವಾರು ಹೋಟೆಲ್‌ಗಳ ರೂಂಗಳು ಇನ್ನೂ ಖಾಲಿ ಇವೆ' ಎಂದು ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಐಷಾರಾಮಿ ಹೋಟೆಲ್‌ನ ಹಿರಿಯ ವ್ಯವಸ್ಥಾಪಕರೊಬ್ಬರು ತಿಳಿಸಿದರು.
'ಹೋಟೆಲ್‌ನಲ್ಲಿ ವಿವಿಧ ವರ್ಗಗಳ 150 ಕೋಣೆಗಳಿವೆ. ಇವುಗಳಲ್ಲಿ 35 ಕೋಣೆಗಳಷ್ಟೇ ತುಂಬಿವೆ. ಗ್ರಾಹಕರ ಸಂಖ್ಯೆ ನಿಧಾನಗತಿಯಲ್ಲಿ ಏರಿಕೆಯಾಗುತ್ತಿದೆ' ಎಂದು ಹೇಳಿದರು.
ಮತ್ತೊಂದು ಐಷಾರಾಮಿ ಹೋಟೆಲ್ ಸಿಬ್ಬಂದಿಯೊಬ್ಬರು, 'ಜುಲೈ ತಿಂಗಳ ಕೊನೆಯ ಎರಡು ವಾರ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಭಾರಿ ಸಂಖ್ಯೆಯಲ್ಲಿ ಬುಕ್ಕಿಂಗ್ ರದ್ದಾಯಿತು. ಇದರಿಂದ ಕಂಪನಿಗೆ 3 ಕೋಟಿಯಿಂದ 4 ಕೋಟಿ ಟಾಕಾ ನಷ್ಟವಾಯಿತು' ಎಂದು ಹೇಳಿದರು.
ಹಸೀನಾ ವಿರುದ್ಧ ಮತ್ತೊಂದು ಪ್ರಕರಣ:
ಸಿಲ್‌ಹಟ್ ನಗರದಲ್ಲಿ ನಡೆದ ಮೆರವಣಿಗೆ ಮೇಲೆ ದಾಳಿ ನಡೆಸಿದ ಆರೋಪದ ಮೇಲೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಮತ್ತು ಇತರ 86 ಮಂದಿ ವಿರುದ್ಧ ಬುಧವಾರ ಪ್ರಕರಣ ಮತ್ತೊಂದು ದಾಖಲಿಸಲಾಗಿದೆ.
ಇದರೊಂದಿಗೆ ಹಸೀನಾ ಅವರ ವಿರುದ್ಧ ದಾಖಲಾದ ಪ್ರಕರಣಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ.
ಜಾತೀಯತಾವಾದಿ ಛತ್ರ ದಳದ ಕಾರ್ಯಕಾರಿ ಅಧ್ಯಕ್ಷ ಜುಬರ್ ಅಹ್ಮದ್ ಅವರು ಹಸೀನಾ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣದಲ್ಲಿ ಹಸೀನಾ ಅವರ ಸಹೋದರಿ ಶೇಖ್ ರೆಹಾನಾ ಅವರನ್ನೂ ಆರೋಪಿಯನ್ನಾಗಿಸಲಾಗಿದೆ.