ಕೋಲ್ಕತ್ತ: ಇಲ್ಲಿನ ಆರ್.ಜಿ. ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಕೊಲೆಯಾದ ವೈದ್ಯ ವಿದ್ಯಾರ್ಥಿನಿಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಕೋಲ್ಕತ್ತ ಪೊಲೀಸರು ಬಿಜೆಪಿಯ ಮಾಜಿ ಸಂಸದೆ ಲಾಕೆಟ್ ಚಟರ್ಜಿ ಮತ್ತು ಇಬ್ಬರು ವೈದ್ಯರಿಗೆ ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬಿಜೆಪಿ ಮಾಜಿ ಸಂಸದೆ ಲಾಕೆಟ್ ಚಟರ್ಜಿ, ಖ್ಯಾತ ಹೃದ್ರೋಗ ತಜ್ಞ ಡಾ.ಕುನಾಲ್ ಸರ್ಕಾರ್ ಮತ್ತು ಡಾ.ಸುವರ್ಣ ಗೋಸ್ವಾಮಿ ಅವರಿಗೆ ಸಮನ್ಸ್ ನೀಡಲಾಗಿದೆ. ಈ ಮೂವರಲ್ಲದೇ ಘಟನೆಯ ಬಗ್ಗೆ ತಪ್ಪು ಮಾಹಿತಿ ಹರಡಿದ 57 ಮಂದಿಗೆ ಪೊಲೀಸರು ಸಮನ್ಸ್ ಜಾರಿ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಭಾನುವಾರ ಮಧ್ಯಾಹ್ನ 3 ಗಂಟೆಗೆ ಲಾಲ್‌ಬಜಾರ್‌ನಲ್ಲಿರುವ ಕೋಲ್ಕತ್ತ ಪೊಲೀಸ್ ಪ್ರಧಾನ ಕಚೇರಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಡಾ.ಕುನಾಲ್ ಸರ್ಕಾರ್ ಮತ್ತು ಡಾ.ಸುವರ್ಣ ಗೋಸ್ವಾಮಿ ಅವರಿಗೆ ಸೂಚಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಡಾ.ಸರ್ಕಾರ್, 'ಲಾಲ್‌ಬಜಾರ್‌ನಲ್ಲಿರುವ ಪ್ರಧಾನ ಕಚೇರಿಯ ಅಧಿಕಾರಿಗಳ ಮುಂದೆ ಹಾಜರಾಗುವಂತೆ ಪೊಲೀಸರಿಂದ ಸಮನ್ಸ್ ನೀಡಿದ್ದಾರೆ' ಎಂದು ತಿಳಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಡಾ.ಗೋಸ್ವಾಮಿ, 'ನನಗೆ ಯಾವುದೇ ಸಮನ್ಸ್ ಬಂದಿಲ್ಲ. ಪ್ರಕರಣದ ತನಿಖೆ ನಡೆಯುತ್ತಿರುವಾಗ ಕೋಲ್ಕತ್ತ ಪೊಲೀಸರು ನನಗೆ ಏಕೆ ಸಮನ್ಸ್ ನೀಡುತ್ತಾರೆ ಎಂಬುವುದು ತಿಳಿದಿಲ್ಲ. ನಾನು ತನಿಖೆಗೆ ಸಹಕರಿಸುತ್ತೇನೆ. ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿಲ್ಲ. ಯಾವುದೇ ವದಂತಿಯನ್ನು ನಾನು ಹಬ್ಬಿಸಿಲ್ಲ' ಎಂದಿದ್ದಾರೆ.
ಮಾಜಿ ಸಂಸದೆ ಚಟರ್ಜಿ ಕೂಡ, ನನಗೆ ಇನ್ನೂ ಯಾವುದೇ ಸಮನ್ಸ್ ಬಂದಿಲ್ಲ ಎಂದು ಹೇಳಿದ್ದಾರೆ.