ಕಣ್ಣೂರು: ತೊಡುಪುಳ ನ್ಯೂಮನ್ ಕಾಲೇಜಿನ ಶಿಕ್ಷಕರ ಕೈ ಕತ್ತರಿಸಿದ ಪ್ರಕರಣದಲ್ಲಿ ಶಂಕಿತ ಆರೋಪಿಗೆ ಸಹಾಯ ಮಾಡಿದ ವ್ಯಕ್ತಿಯನ್ನು ಪೋಲೀಸರು ವಶಕ್ಕೆ ಪಡೆದಿದ್ದಾರೆ.
ಇರಿಟ್ಟಿ ವಲ್ಲಡ್ಕೋಡ್ ಮೂಲದ ವ್ಯಕ್ತಿಯನ್ನು ಎನ್‍ಐಎ ವಶಕ್ಕೆ ತೆಗೆದುಕೊಂಡಿದೆ. ಪ್ರಮುಖ ಆರೋಪಿ ಸವಾದ್ ಇರಿಟ್ಟಿ ಮೂಲದವನೆಂದು ಪತ್ತೆಯಾದ ನಂತರ ಎನ್‍ಐಎ ಈ ಕ್ರಮ ಕೈಗೊಂಡಿದೆ.
ತಲಶ್ಶೇರಿಯಲ್ಲಿ ಎನ್‍ಐಎ ತಂಡ ಆತನನ್ನು ವಶಕ್ಕೆ ತೆಗೆದುಕೊಂಡಿದೆ. ಪ್ರಕರಣದ ಪ್ರಮುಖ ಆರೋಪಿ ಸವಾದ್ ಎಂಬಾತನಿಗೆ ತಲೆಮರೆಸಿಕೊಳ್ಳಲು ಸಹಾಯ ಮಾಡಿದ್ದ ಎಂಬ ಶಂಕೆಯ ಮೇರೆಗೆ ವಶಕ್ಕೆ ಪಡೆಯಲಾಗಿದೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಎನ್‍ಐಎ ತಿಳಿಸಿದೆ. ನಿಖರವಾದ ಸಾಕ್ಷ್ಯಾಧಾರಗಳು ದೊರೆತ ನಂತರ ಬಂಧನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಎನ್ಐಎ ಹೇಳಿದೆ.