ಕೊಚ್ಚಿ: ತಿರುವನಂತಪುರಂ ಶ್ರೀಪದ್ಮನಾಭ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಚಿಕನ್ ಬಿರಿಯಾನಿ ಔತಣ ಕೂಟ ಘಟನೆ ಕುರಿತು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ತನಿಖಾ ವರದಿ ಸಲ್ಲಿಸಿದೆ.
ಮುಚ್ಚಿದ ಲಕೋಟೆಯಲ್ಲಿ ವರದಿ ಸಲ್ಲಿಸಲಾಗಿದೆ. ಮಿಟಿಲಕಂ ಕಚೇರಿಯ ವಿವರವಾದ ರೂಪುರೇಷೆ ಸಲ್ಲಿಸುವಂತೆ ಅರ್ಜಿದಾರರಿಗೆ ಹೈಕೋರ್ಟ್ ಸೂಚಿಸಿತ್ತು. ಮುಖ್ಯ ಭದ್ರತಾ ಅಧಿಕಾರಿ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಕೋರಿದ್ದಾರೆ.
ಕೆಲವು ಭಕ್ತರು ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುತ್ತಿದೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದಿನ ತಿಂಗಳು 11ಕ್ಕೆ ಮುಂದೂಡಿದೆ. ದೈವಸ್ವಂನ ಕಾರ್ಯನಿರ್ವಹಣಾಧಿಕಾರಿಗಳ ಕಚೇರಿಯಲ್ಲಿ ಚಿಕನ್ ಬಿರಿಯಾನಿ ಔತಣ ಕೂಟ ಕಳೆದತಿಂಗಳು ಹಮ್ಮಿಕೊಳ್ಳಲಾಗಿತ್ತು. ನೌಕರನ ಮಗನಿಗೆ ಸರ್ಕಾರಿ ನೌಕರಿ ಸಿಕ್ಕಿದ ಸಂಭ್ರಮದ ಅಂಗವಾಗಿ ಚಿಕನ್ ಬಿರಿಯಾನಿ ಔತಣ ಏರ್ಪಡಿಸಲಾಗಿತ್ತು.
ಇದರ ವಿವರ ಹೊರಬಿದ್ದಿದ್ದು, ಘಟನೆ ಸಾಕಷ್ಟು ಟೀಕೆಗೆ ಕಾರಣವಾಗಿತ್ತು. ದೃಶ್ಯಗಳ ಸಮೇತ ಮಾಹಿತಿ ಹೊರಬಿದ್ದ ಬಳಿಕ ಭಕ್ತರು ಹಾಗೂ ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದಿದ್ದವು. ವಿವಾದ ತೀವ್ರಗೊಳ್ಳುತ್ತಿರುವಂತೆ ದೇವಸ್ಥಾನದ ಆವರಣದಲ್ಲಿ ಮಾಂಸಾಹಾರ ನಿಷೇಧಿಸಿ ಕಾರ್ಯನಿರ್ವಹಣಾಧಿಕಾರಿ ಆದೇಶ ಹೊರಡಿಸಿದ್ದರು.