ಕಾಸರಗೋಡು: ಜಿಲ್ಲಾದ್ಯಂತ ಭಕ್ತಿ, ಸಂಭ್ರಮದ ಶ್ರೀಕೃಷ್ಣ ಜನ್ಮಾಷ್ಟಮಿ ಸೋಮವಾರ ಜರುಗಿತು. ನಾನಾ ದೇವಾಲಯ, ಸಂಘ ಸಂಸ್ಥೆಗಳು, ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿತ್ತು.
ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾ ವಠಾರದಲ್ಲಿ 44ನೇ ವರ್ಷದ ಸಾರ್ವಜನಿಕ ಶ್ರೀ ಕೃಷ್ಣ ಜನ್ಮಾಷ್ಟಮಿ ನಡೆಯಿತು. ವಿಶ್ವ ಹಿಂದೂ ಪರಿಷತ್ ಹಾಗೂ ಬಾಲಗೋಕುಲ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಣಿಪುರ ಶ್ರೀ ಗೋಪಾಲೃಷ್ಣ ದೇವಸ್ಥಾನ, ಅನಂತಪುರ ಶ್ರೀ ಅನಂತಪದ್ಮನಾಭ ಸವಾಮಿ ದೇವಾಲಯ, ಮುಜುಂಗಾವು ಶ್ರೀ ಪಾರ್ಥಸಾರರ್ಥಕೃಷ್ಣ ದೇವಸ್ಥಾನ ಸೇರಿದಂತೆ ಜಿಲ್ಲೆಯ ಶ್ರೀಕೃಷ್ಣ ದೇಗುಲಗಳಲ್ಲಿ ವಿಶೇಷ ಪೂಜೆಯೊಂದಿಗೆ ಉತ್ಸವ ಆಚರಿಸಲಾಯಿತು.
ಬೋವಿಕ್ಕಾನದ ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಸಮಿತಿ ವತಿಯಿಂದ ಟ್ಯಾಬ್ಲೋ, ಶ್ರೀಕೃಷ್ಣ-ರಾಧೆಯರು, ಸ್ತಬ್ಧಚಿತ್ರಗಳನ್ನೊಳಗೊಂಡ ವೈಭವಪೂರ್ಣ ಮೆರವಣಿಗೆ ಜನಾಕರ್ಷಣೆಗೆ ಕಾರಣವಾಯಿತು.
ಖಂಡಿಗೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ:
ಎಣ್ಮಕಜೆ ಪಂಚಾಯಿತಿಯ ಖಂಡಿಗೆ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಖಂಡಿಗೆ ಸೇವಾ ಕೇಂದ್ರ ವಠಾರದಲ್ಲಿ ಜರುಗಿತು. ಹಿರಿಯ ನೇತ್ರ ತಜ್ಞ ಡಾ. ರಾಘವೇಂದ್ರ ಭಟ್ ದೀಪೋಜ್ವಲನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿವಿಧ ಸ್ಪರ್ಧೆಗಳು ನಡೆಯಿತು ಸಾಧಕರಿಗೆ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಹಿರಿಯ ದೈವ ನರ್ತನಕಲಾವಿದ ಚೋಮ ಖಂಡಿಗೆ ಅವರಿಗೆ ಗೌರವಾರ್ಪಣೆ ಹಾಗೂ ಕೇಂದ್ರೀಯ ವಿಶ್ವ ವಿದ್ಯಾಲಯದ ಮಾಸ್ಟರ್ ಆಫ್ ಎಜುಕೇಶನ್ ಪರೀಕ್ಷೆಯಲ್ಲಿ ಉನ್ನತ ಅಂಕ ಗಳಿಸಿದ ಗಣೇಶ್ ಕುಮಾರ್ ಖಂಡಿಗೆ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು.