ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಮತ್ತು ಪಿಡಿಪಿ ನಾಯಕ ಚೌಧರಿ ಜುಲ್ಫಿಕರ್ ಅಲಿ ಅವರು ಇಂದು (ಭಾನುವಾರ) ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಜಮ್ಮುವಿನ ಬಿಜೆಪಿ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚೌಧರಿ ಜುಲ್ಫಿಕರ್ ಅಲಿ ಅವರನ್ನು ಬಿಜೆಪಿ ನಾಯಕರು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ.
ವಿಧಾನಸಭಾ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರಬಹುದು ಎಂಬ ಊಹಾಪೋಹಗಳ ನಡುವೆ ಜುಲ್ಫಿಕರ್ ಅಲಿ ಅ ಅವರು ಶನಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದರು.
ವಕೀಲರಾಗಿರುವ ಜುಲ್ಫಿಕರ್ ಅಲಿ ಅವರು 2008 ಮತ್ತು 2014ರ ವಿಧಾನಸಭಾ ಚುನಾವಣೆಯಲ್ಲಿ ರಾಜೌರಿ ಜಿಲ್ಲೆಯ ದರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದಿಂದ (ಪಿಡಿಪಿ) ಸ್ಫರ್ಧಿಸಿ ಗೆಲುವು ಸಾಧಿಸಿದ್ದರು. ಬಳಿಕ 2015ರಿಂದ 2018ರವರೆಗೆ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾಗಿ ಸೇವೆ ಸಲ್ಲಿಸಿದ್ದರು.
2018ರ ಜೂನ್‌ನಲ್ಲಿ ಪಿಡಿಪಿ-ಬಿಜೆಪಿ ಸಮಿಶ್ರ ಸರ್ಕಾರ ಪತನಗೊಂಡಿತು. ಬಳಿಕ 2020ರಲ್ಲಿ ಮಾಜಿ ಸಚಿವ ಅಲ್ತಾಫ್ ಬುಖಾರಿ ನೇತೃತ್ವದ ಅಪ್ನಿ ಪಕ್ಷಕ್ಕೆ ಜುಲ್ಫಿಕರ್ ಅಲಿ ಸೇರಿದಂತೆ ಹಲವು ಪಿಡಿಪಿ ನಾಯಕರು ಸೇರ್ಪಡೆಗೊಂಡಿದ್ದರು.
ಜುಲ್ಫಿಕರ್ ಅಲಿ ಬಿಜೆಪಿ ಸೇರ್ಪಡೆಯಾಗಿರುವ ಬಗ್ಗೆ ಮ್ಮು ಮತ್ತು ಕಾಶ್ಮೀರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ರವೀಂದ್ರ ರೈನಾ ಬೆಂಬಲ ವ್ಯಕ್ತಪಡಿಸಿದ್ದು, 'ಚೌಧರಿ ಅವರ ಸೇರ್ಪಡೆಯು ನಮ್ಮ ಪಕ್ಷಕ್ಕೆ ಸಾಕಷ್ಟು ಬಲ ತಂದಿದೆ. ರಾಜೌರಿ-ಪೂಂಚ್ ವಲಯದಲ್ಲಿ ಅವರು ಪ್ರಭಾವಿಯಾಗಿದ್ದಾರೆ' ಎಂದು ಹೇಳಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭೆ ಕ್ಷೇತ್ರಗಳಿಗೆ ಸೆಪ್ಟೆಂಬರ್ 18, 25 ಹಾಗೂ ಅಕ್ಟೋಬರ್ 1ರಂದು ಮತದಾನ ನಡೆಯಲಿದೆ. ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.