ದಕ್ಷಿಣ ಕಾಶ್ಮೀರ ಜಿಲ್ಲೆಯ ಕೊಕರ್ನಾಗ್ ಪ್ರದೇಶದ ಅಹ್ಲಾನ್ ಗಗರ್ಮಂಡು ಅರಣ್ಯದಲ್ಲಿ ಉಗ್ರರ ಉಪಸ್ಥಿತಿಯ ಬಗ್ಗೆ ಮಾಹಿತಿ ಪಡೆದ ನಂತರ ಶೋಧ ಕಾರ್ಯಾಚರಣೆ ಆರಂಭಸಲಾಗಿತ್ತು. ಈ ವೇಳೆ ಉಗ್ರರೊಂದಿಗೆ ಗುಂಡಿನ ಕಾಳಗ ನಡೆದಿದೆ ಎಂದು ಅವರು ಹೇಳಿದ್ದಾರೆ.
ಅರಣ್ಯದಲ್ಲಿ ಅಡಗಿಕೊಂಡಿದ್ದ ಭಯೋತ್ಪಾದಕರು ಶೋಧ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸೇನಾ ಸಿಬ್ಬಂದಿಯನ್ನು ಗಮನಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಐವರು ಸೇನಾ ಸಿಬ್ಬಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಈ ಪ್ರದೇಶಕ್ಕೆ ಹೆಚ್ಚಿನ ಭದ್ರತಾ ಸಿಬ್ಬಂದಿ ರವಾನಿಸಲಾಗಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚಲು ಮತ್ತು ತಟಸ್ಥಗೊಳಿಸಲು ಇನ್ನೂ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
"ನಿರ್ದಿಷ್ಟ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭಾರತೀಯ ಸೇನೆ ಮತ್ತು ಜಮ್ಮು, ಕಾಶ್ಮೀರ ಪೊಲೀಸರು ಇಂದು ಕೊಕರ್ನಾಗ್, ಅನಂತನಾಗ್ ಪ್ರದೇಶದಲ್ಲಿ ಜಂಟಿ ಶೋಧ ಕಾರ್ಯಾಚರಣೆ ಪ್ರಾರಂಭಿಸಿದರು. ಈ ವೇಳೆ ಉಗ್ರರೊಂದಿಗೆ ಗುಂಡಿನ ಚಕಮಕಿ ನಡೆಯಿತು" ಎಂದು ಭಾರತೀಯ ಸೇನೆಯ ಶ್ರೀನಗರ ಮೂಲದ ಚಿನಾರ್ ಕಾರ್ಪ್ಸ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.