ನವದೆಹಲಿ: 'ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಯಶಸ್ಸಿನ ರುಚಿ ಸಿಕ್ಕಿದ್ದು, ಹೊಸ ಹೊಸ ರಾಜಕೀಯ ತಂತ್ರಗಾರಿಕೆಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ' ಎಂದು ಮಾಜಿ ಸಂಸದೆ, ಬಿಜೆಪಿ ನಾಯಕಿ ಸ್ಮೃತಿ ಇರಾನಿ ಹೇಳಿದರು.
'ಅವರು(ರಾಹುಲ್) ಎಚ್ಚರಿಕೆಯ ಹೆಜ್ಜೆಗಳನ್ನಿಡುತ್ತಿದ್ದು, ನಿರ್ದಿಷ್ಟ ಸಮುದಾಯಗಳನ್ನು ಸೆಳೆಯುವಲ್ಲಿ ಯಶಸ್ಸಿಯಾಗುತ್ತಿದ್ದಾರೆ. ಅವರ ಕೆಲಸಗಳನ್ನು ಲಘುವಾಗಿ ಪರಿಗಣಿಸುವುದು ತಪ್ಪು. ಅದು ಒಳ್ಳೆದು, ಕೆಟ್ಟದು ಅಥವಾ ಅಪಕ್ವತೆಯಿಂದ ಕೂಡಿರಲಿ.. ಅವು ವಿಭಿನ್ನ ರಾಜಕೀಯ ತಂತ್ರಗಾರಿಕೆಯನ್ನು ಪ್ರತಿನಿಧಿಸುತ್ತವೆ' ಎಂದು ಹೇಳಿದರು.
'ಜಾತಿ ಬಗ್ಗೆ ಮಾತನಾಡುವಾಗ, ಸಂಸತ್ತಿಗೆ ಬಿಳಿ ಟಿ-ಶರ್ಟ್ ಧರಿಸಿ ಬರುವಾಗ.. ಅದು ದೇಶದ ಯುವಜನತೆಗೆ ಯಾವ ರೀತಿಯ ಸಂದೇಶ ನೀಡುತ್ತದೆ ಎಂಬ ಅರಿವು ರಾಹುಲ್ ಅವರಿಗಿದೆ' ಎಂದರು.
'ಮಿಸ್ ಇಂಡಿಯಾ' ಸ್ಪರ್ಧೆ ಕುರಿತ ರಾಹುಲ್ ಹೇಳಿಕೆಯನ್ನು ಪ್ರಸ್ತಾಪಿಸಿ ಮಾತನಾಡಿದ ಇರಾನಿ, 'ಮಿಸ್ ಇಂಡಿಯಾ ಸ್ಪರ್ಧೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಹುಲ್ ಗಾಂಧಿಗೆ ಗೊತ್ತಿದೆ. ಆದರೂ ಅಂತಹ ಸ್ಪರ್ಧೆಗಳಲ್ಲಿ ದಲಿತರು/ಆದಿವಾಸಿಗಳಿಗೆ ಸರಿಯಾದ ಪ್ರಾತಿನಿಧ್ಯತೆ ಸಿಗುತ್ತಿಲ್ಲ ಎಂದು ಹೇಳುತ್ತಾರೆ. ಇಂತಹ ಹೇಳಿಕೆಗಳ ಮೂಲಕ ಗಮನ ಸೆಳೆಯಲು ಪ್ರಯತ್ನಿಸುತ್ತಾರೆ. ಇದೇ ಅವರ ತಂತ್ರಗಾರಿಕೆ' ಎಂದು ಹೇಳಿದರು.
'ರಾಹುಲ್ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ದೇಶದ ಮತದಾರರನ್ನು ಮುಖ್ಯವಾಗಿ ಹಿಂದೂಗಳನ್ನು ಓಲೈಸಲು ಪ್ರಯತ್ನಿಸಿದರು. ಆದರೆ ಆ ತಂತ್ರಗಾರಿಕೆ ಕೆಲಸ ಮಾಡಲಿಲ್ಲ. ಯಾವಾಗ ಆ ತಂತ್ರಗಾರಿಕೆ ಫಲಿಸಲಿಲ್ಲವೋ ಆಗ ಅವರು(ರಾಹುಲ್) ಜಾತಿ ಸಮಸ್ಯೆಯ ಬಗ್ಗೆ ಮಾತನಾಡಲು ಶುರು ಮಾಡಿದರು' ಎಂದು ಹೇಳಿದರು.
ಅಮೇಠಿ ಲೋಕಸಭಾ ಕ್ಷೇತ್ರದಲ್ಲಿ ಅನುಭವಿಸಿದ ಸೋಲು, ಸದ್ಯದ ರಾಜಕಾರಣದ ಬಗ್ಗೆಯೂ ಈ ವೇಳೆ ಮಾತನಾಡಿದರು.
ಸದ್ಯ ರಾಹುಲ್ ಗಾಂಧಿ ಅವರ ಬಗೆಗಿನ ಸ್ಮೃತಿ ಅವರ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.