ಕೋಲ್ಕತ್ತ: ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಗ್ರಾಮಸ್ಥರು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕೋಲ್ಕತ್ತ: ಪಶ್ಚಿಮ ಬಂಗಾಳದ ಝಾರ್ಗ್ರಾಮ್‌ನಲ್ಲಿ ಗ್ರಾಮಸ್ಥರು ಹೆಣ್ಣಾನೆಯೊಂದಕ್ಕೆ ಬೆಂಕಿ ಹಚ್ಚಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ.
ಕೆಲ ನೆಟ್ಟಿಗರ ಪ್ರಕಾರ, ಆನೆಯು ಗರ್ಭ ಧರಿಸಿದೆ. ಬೆಂಕಿ ಜ್ವಾಲೆಯ ಸರಳುಗಳನ್ನು ಸಮೀಪದ ಮನೆಯಿಂದ ಅದರ ಮೇಲೆ ಎಸೆಯುತ್ತಿದ್ದು, ಗಾಯಗೊಂಡ ಹೆಣ್ಣಾನೆ ನೋವಿನಿಂದ ಒದ್ದಾಡುತ್ತಿರುವ ದೃಶ್ಯ ವಿಡಿಯೊದಲ್ಲಿದೆ.
ಈ ಕುರಿತಂತೆ ಪ್ರತಿಕ್ರಿಯೆಗೆ ಪಶ್ಚಿಮ ಬಂಗಾಳದ ಅರಣ್ಯ ಸಚಿವ ಬಿರ್ಬಾಹಾ ಹನ್ಸಾದಾ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಪಿಟಿಐ ಹೇಳಿದೆ. 'ಘಟನೆ ಕುರಿತಂತೆ ನಮಗೆ ಮಾಹಿತಿ ಸಿಕ್ಕಿದೆ. ವಿಡಿಯೊ ನೋಡಿದ್ದೇವೆ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ' ಎಂದು ಹಿರಿಯ ಅರಣ್ಯಾಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.
ಬೀದಿನಾಯಿಗಳಿಗೆ ಕಿರುಕುಳ ಕುರಿತಂತೆ ಸಿನಿಮಾ ಮಾಡಿದ್ದ ನಿರ್ದೇಶಕ ತಥಾಗತ ಮುಖರ್ಜಿ, ಆನೆ ಮೇಲೆ ದೌರ್ಜನ್ಯದ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದು, 'ಕಾಡಾನೆಗಳ ನಿರ್ವಹಣೆಯಲ್ಲಿ ತೊಡಗಿದ್ದ ಸ್ಥಳೀಯರು ಅರಣ್ಯ ಸಚಿವರ ಕ್ಷೇತ್ರದಲ್ಲೇ ಗರ್ಭ ಧರಿಸಿದ್ದ ಆನೆಯನ್ನು ಕೊಂದು ಹಾಕಿದ್ದಾರೆ. ಈ ಬಗ್ಗೆ ಎಲ್ಲರೂ ಮೌನವಹಿಸಿದ್ದಾರೆ'ಎಂದು ಬರೆದುಕೊಂಡಿದ್ದಾರೆ.
ನಟಿ ಶ್ರೀಲೇಖಾ ಮಿತ್ರಾ ಸಹ ಈ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ್ದು, ನಾವು ವಿನಾಶದತ್ತ ಹೋಗುತ್ತಿದ್ದೇವೆಯೇ? ಪ್ರಾಣಿಗಳ ಮೇಲಿನ ಇಂತಹ ಹಿಂಸಾಚಾರ ಮತ್ತು ಆಕ್ರಮಣವನ್ನು ನಾನು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.