ನವದೆಹಲಿ: ರಾಜ್ಯಸಭೆಯಲ್ಲಿನ ಚರ್ಚೆಯೊಂದರ ವೇಳೆ ಮಾತನಾಡಲು ಜಯಾ ಬಚ್ಚನ್ ಅವರನ್ನು ಆಹ್ವಾನಿಸುವ ವೇಳೆ ಸಭಾಪತಿ ಜಗದೀಪ್ ಧನಕರ್ 'ಜಯಾ ಅಮಿತಾಭ್ ಬಚ್ಚನ್'ಎಂದು ಕರೆದಿದ್ದಕ್ಕಾಗಿ ಜಯಾ ಬಚ್ಚನ್ ಮತ್ತು ಧನಕರ್ ನಡುವೆ ಇಂದು ಮಾತಿನ ಚಕಮಕಿ ನಡೆದಿದೆ.
ಧನಕರ್ ಅವರ ಸಂಭೋದನೆ ಬಗ್ಗೆ ತೀವ್ರ ಸಿಡಿಮಿಡಿಗೊಂಡಂತೆ ಕಂಡ ಜಯಾ ಬಚ್ಚನ್, ನನ್ನ ಜೊತೆ ನೀವು ಮಾತನಾಡುವ ಟೋನ್ ಸ್ವೀಕಾರಾರ್ಹವಲ್ಲ ಎಂದು ಆರೋಪಿಸಿದರು.
ನಮ್ಮ ಜೊತೆ ನೀವು ಸ್ವೀಕಾರಾರ್ಹವಲ್ಲದ ಟೋನ್‌ನಲ್ಲಿ ಮಾತನಾಡುತ್ತಿದ್ದು, ಕ್ಷಮೆ ಕೇಳಬೇಕೆಂದು ಸ್ಪೀಕರ್ ಜಗದೀಪ್ ಧನಕರ್ ಅವರಿಗೆ ಒತ್ತಾಯಿಸಿದರು.
'ನಾನೊಬ್ಬಳು ಕಲಾವಿದೆ. ದೇಹ ಭಾಷೆ ಮತ್ತು ಅಭಿವ್ಯಕ್ತಿ ನನಗೆ ಅರ್ಥವಾಗುತ್ತದೆ. ನಿಮ್ಮ ಟೋನ್ ಸರಿಯಲ್ಲ. ನಾವು ನಿಮ್ಮ ಸಹೋದ್ಯೋಗಿಗಳು. ಆದರೆ, ನಿಮ್ಮ ಟೋನ್ ಸ್ವೀಕಾರಾರ್ಹವಲ್ಲ'ಎಂದು ಜಯಾ ಕಿಡಿಕಾರಿದರು.
ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಧನಕರ್ ಅವರು, 'ಸಾಕುಮಾಡಿ. ನೀವು ಯಾರಾದರೂ ಆಗಿರಬಹುದು. ನಟಿಯೇ ಆಗಿರಬಹುದು. ಸದನದ ಶಿಷ್ಟಾಚಾರವನ್ನು ಪಾಲಿಸಲೇಬೇಕು. ನೀವು ಮಾತ್ರ ಪ್ರಸಿದ್ಧರು ಎಂಬ ಭ್ರಮೆಯಲ್ಲಿ ಇರಬೇಡಿ. ಇಲ್ಲಿ ಎಲ್ಲರೂ ಯಶಸ್ಸು ಕಂಡಿದ್ದಾರೆ' ಎಂದರು.
ಬಳಿಕ, ಪ್ರತಿಭಟನೆ ಕೈಬಿಟ್ಟು ನಿಮ್ಮ ಸ್ಥಳಗಳಿಗೆ ಹೋಗಿ ಕುಳಿತುಕೊಳ್ಳಿ. ಇಲ್ಲವಾದರೆ, ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಧನಕರ್ ಎಚ್ಚರಿಕೆ ನೀಡಿದರು.
'ನಿಮ್ಮಲ್ಲಿ ಗಾಂಭೀರ್ಯದ ಕೊರತೆ ಇದೆ. ನಿಮ್ಮ ಕರ್ತವ್ಯ ತೊರೆದು ಹೊರಹೋಗುತ್ತಿದ್ದೀರಿ'ಎಂದು ಧನಕರ್ ಜಯಾ ಬಚ್ಚನ್ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸದನದಿಂದ ಹೊರನಡೆಯುವ ಮುನ್ನ ಹೇಳಿದರು.
ಬಳಿಕ, ಸಭಾಪತಿ ಧನಕರ್ ಅವರನ್ನು ಗುರಿಯಾಗಿಸಿ ಹೇಳಿಕೆ ನೀಡಿದ್ದಕ್ಕಾಗಿ ಜಯಾ ಬಚ್ಚನ್ ವಿರುದ್ಧ ರಾಜ್ಯಸಭೆಯ ಸಭಾನಾಯಕ ಜೆ.ಪಿ. ನಡ್ಡಾ ಖಂಡನಾ ನಿರ್ಣಯ ಮಂಡಿಸಿದರು.
ಘಟನೆ ಕುರಿತು ಸುದ್ದಿಗಾರರ ಜೊತೆ ಮಾತನಾಡಿದ ಜಯಾ ಅವರು, 'ಧನಕರ್ ಅವರ ಮಾತಿನ ಧಾಟಿ ನನಗೆ ಸರಿಕಾಣಲಿಲ್ಲ. ಅದಲ್ಲದೇ ಅವರು ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮಾತನಾಡುವ ವೇಳೆ ಮೈಕ್ ಅನ್ನು ಸ್ಥಗಿತಗೊಳಿಸಿದ್ದೂ ಸರಿಯಲ್ಲ. ಇಲ್ಲಿ ಯಾರೂ ಶಾಲಾ ಮಕ್ಕಳಿಲ್ಲ. ನಮ್ಮಲ್ಲಿ ಹಲವರು ಹಿರಿಯ ನಾಗರಿಕರಿದ್ದೇವೆ. ಮೈಕ್ ಆಫ್ ಮಾಡುವಂಥ ನಡೆ ಸದನದ ಪರಂಪರೆಗೆ ವಿರುದ್ಧವಾದುದು' ಎಂದರು.