ಕೊಚ್ಚಿ: ವ್ಯಕ್ತಿಯ ಉಸಿರಾಟದ ವಾಸನೆಯ ಆಧಾರದ ಮೇಲೆ ಡ್ರಗ್ಸ್ ಬಳಸಿದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಕೇರಳ ಹೈಕೋರ್ಟ್ ತೀರ್ಪು ನೀಡಿದೆ.
ವ್ಯಕ್ತಿಯ ಉಸಿರಾಟದಿಂದ ಡ್ರಗ್ಸ್ ವಾಸನೆ ಬಂದಿರುವ ಹಿನ್ನೆಲೆಯಲ್ಲಿ ಡ್ರಗ್ಸ್ ಸೇವಿಸಿದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ನಿಚ್ಚಳದೊಂದಿಗೆ ಸ್ಪಷ್ಟಪಡಿಸಿದೆ. ಇದನ್ನು ಅನುಮತಿಸಿದರೆ, ತನಿಖಾಧಿಕಾರಿಯು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‍ಸ್ಟೆನ್ಸ್ ಆಕ್ಟ್, 1985 (ಎನ್‍ಡಿಪಿಎಸ್ ಆಕ್ಟ್) ಅಡಿಯಲ್ಲಿ ಯಾರಿಗಾದರೂ ಆರೋಪ ಹೊರಿಸಬಹುದಾದ ಪರಿಸ್ಥಿತಿಯನ್ನು ಸೃಷ್ಟಿಸುತ್ತದೆ ಎಂದು ನ್ಯಾಯಾಲಯ ಗಮನಿಸಿದೆ.
ವಾಸನೆಯಂತಹ ಸಂವೇದನಾ ಗ್ರಹಿಕೆಗಳು ವ್ಯಕ್ತಿನಿಷ್ಠವಾಗಿರುವುದರಿಂದ, ತಪ್ಪು ಗುರುತಿಸಲು ಅವುಗಳನ್ನು ಅವಲಂಬಿಸಲಾಗದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮಾಲುಂಬುಜಾ ಅಣೆಕಟ್ಟಿನ ಬಳಿ ವ್ಯಕ್ತಿಯೊಬ್ಬರು ಧೂಮಪಾನ ಮಾಡುತ್ತಿದ್ದುದನ್ನು ಪೆÇಲೀಸ್ ಅಧಿಕಾರಿಯೊಬ್ಬರು ಗಮನಿಸಿ ಆ ವ್ಯಕ್ತಿಯ ಬಳಿಗೆ ಪೋಲೀಸ್ ಅಧಿಕಾರಿ ಬರುವುದನ್ನು ಕಂಡು ಆತ ಸಿಗರೇಟನ್ನು ಅಣೆಕಟ್ಟಿಗೆ ಎಸೆದ ಎಂಬುದು ಪ್ರಾಸಿಕ್ಯೂಷನ್ ಪ್ರಕರಣವಾಗಿದೆ. ಆದರೆ, ಪೆÇಲೀಸ್ ಅಧಿಕಾರಿಯು ಯುವಕನ ಉಸಿರಿನ ಮೇಲೆ ಗಾಂಜಾ ವಾಸನೆ ಮತ್ತು ಮಾದಕವಸ್ತು ಸೇವನೆಗಾಗಿ ಎನ್‍ಡಿಪಿಎಸ್ ಕಾಯ್ದೆಯ ಸೆಕ್ಷನ್ 27 (ಬಿ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಆ ಪ್ರಕರಣದಲ್ಲಿ ತನಿಖಾಧಿಕಾರಿ ಬಳಸಿರುವ ಮೂಗಿನ ವಾಸನೆ(ಡ್ರಗ್ಸ್ ಬಳಸಿದ ವಾಸನೆ) ಪುರಾವೆಯಾಗದು ಮತ್ತು ವಿಧಿವಿಜ್ಞಾನ ಸಾಕ್ಷ್ಯವಿಲ್ಲದೆ ಅಂತಿಮವಾಗಿ ಶಿಕ್ಷೆಗೆ ಗುರಿಯಾಗಿಸಲಾಗದು ಎಂಬ ಕಾರಣಕ್ಕಾಗಿ ತನ್ನ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್‍ಗೆ ಮೊರೆ ಹೋಗಿದ್ದರು.
ಆರೋಪಿ ಡ್ರಗ್ಸ್ ಸೇವಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಮೌಖಿಕ ಸಾಕ್ಷ್ಯವನ್ನು ಪ್ರಸ್ತುತಪಡಿಸುವ ಹಕ್ಕು ಇದೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು. ವೈದ್ಯಕೀಯ ಸಾಕ್ಷ್ಯವನ್ನು ಸಹ ನೀಡಬಹುದು ಮತ್ತು ಆದ್ದರಿಂದ ಪ್ರಕರಣವನ್ನು ಈಗ ರದ್ದುಗೊಳಿಸಲಾಗುವುದಿಲ್ಲ ಎಂದು ಅವರು ವಾದಿಸಿದರು.
ಆರೋಪವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಮತ್ತು ಪ್ರಾಸಿಕ್ಯೂಷನ್ ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗಪಡಿಸುತ್ತಿದ್ದಾರೆ ಎಂದು ನ್ಯಾಯಾಲಯ ಹೇಳಿದೆ. ಆಪಾದಿತ ಕೃತ್ಯವನ್ನು ಸಾಬೀತುಪಡಿಸಲು ಯಾವುದೇ ಡ್ರಗ್ಸ್ ವಶಪಡಿಸಿಕೊಂಡಿಲ್ಲ. ಯಾವುದೇ ವೈದ್ಯಕೀಯ ಪರೀಕ್ಷೆಯಿಲ್ಲದೆ, ಕಪೋಲಕಲ್ಪಿತ ಸ್ವರೂಪವನ್ನು ಸಾಬೀತುಪಡಿಸುವುದು ಅಸಾಧ್ಯವೆಂದು ಗಮನಿಸಿದ ನ್ಯಾಯಾಲಯವು ವಿಚಾರಣೆಯನ್ನು ರದ್ದುಗೊಳಿಸಿತು.