ನವದೆಹಲಿ:ಈ ವರ್ಷದ ಅಕ್ಟೋಬರ್ ನಲ್ಲಿ ನಡೆಯುವ ಶಾಂಘೈ ಸಹಕಾರ ಸಂಸ್ಥೆಯ ಸರ್ಕಾರಗಳ ಮುಖ್ಯಸ್ಥ ಮಂಡಳಿ (ಸಿಎಚ್ ಜಿ) ಸಭೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಎಸ್ ಸಿಓ ಮುಖಂಡರನ್ನು ಪಾಕಿಸ್ತಾನ ಆಹ್ವಾನಿಸಿದೆ.
ಆದರೆ ಮೋದಿ ಇಸ್ಲಾಮಾಬಾದ್ ಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆ ಇಲ್ಲ ಎನ್ನಲಾಗಿದ್ದು, ಕಾರ್ಯಕ್ರಮಕ್ಕೆ ಭಾರತವನ್ನು ಪ್ರತಿನಿಧಿಸಲು ಸಚಿವರನ್ನು ನಿಯೋಜಿಸುತ್ತಾರೆಯೇ ಎನ್ನುವ ಕುತೂಹಲ ಮೂಡಿದೆ.
ಮುಂದಿನ ಅಕ್ಟೋಬರ್ 15-16ರಂದು ಪರ್ಯಾಯ ಅಧ್ಯಕ್ಷರಾಷ್ಟ್ರವಾಗಿರುವ ಪಾಕಿಸ್ತಾನ ಈ ಸಭೆಯ ಆತಿಥ್ಯ ವಹಿಸಲಿದೆ. ಇದು ಯೂರೇಶಿಯನ್ ಸಮೂಹದಲ್ಲಿ ಕೌನ್ಸಿಲ್ ಆಫ್ ಹೆಡ್ಸ್ ಆಫ್ ಸ್ಟೇಟ್ ಬಳಿಕ ಇದು ಅತ್ಯುನ್ನತ ನಿರ್ಧಾರಕ ಸಂಸ್ಥೆಯಾಗಿದೆ.
ಈ ವರ್ಷ ಖಝಾಕಿಸ್ತಾನದಲ್ಲಿ ನಡೆದ ದೇಶಗಳ ಮುಖ್ಯಸ್ಥರ ಶೃಂಗಸಭೆಗೆ ಗೈರುಹಾಜರಾಗಿದ್ದನ್ನು ಹೊರತುಪಡಿಸಿದರೆ ಮೋದಿ ನಿಯತವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ. ಜುಲೈನಲ್ಲಿ ಸಂಸತ್ ಅಧಿವೇಶನ ನಡೆಯುವ ಸಂದರ್ಭದಲ್ಲಿ ಇದು ಆಯೋಜನೆಯಾದ್ದರಿಂದ ಮೋದಿ ಸಭೆಗೆ ಗೈರಾಗಿದ್ದರು.
ಸಿಎಚ್ ಜಿಯಲ್ಲಿ ಸಾಮಾನ್ಯವಾಗಿ ಭಾರತವನ್ನು ಪ್ರತಿನಿಧಿಸಲು ಸಚಿವರೊಬ್ಬರನ್ನು ನಿಯೋಜಿಸುವುದು ವಾಡಿಕೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಬಿಷ್ಕೆಕ್ ನಲ್ಲಿ ನಡೆದ ಕಳೆದ ಸಿಎಚ್ ಜಿ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಪಾಕಿಸ್ತಾನದಲ್ಲಿ ನಡೆಯುವ ಸಭೆಯಲ್ಲಿ ಮುಖಂಡರು ಭೌತಿಕವಾಗಿ ಭಾಗವಹಿಸಲು ಸಾಧ್ಯವಾಗದಿದ್ದಲ್ಲಿ, ವರ್ಚುವಲ್ ವಿಧಾನದ ಮೂಲಕ ಭಾಗವಹಿಸಲು ಅವಕಾಶವಿದೆಯೇ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಭಾರತ ಹಾಗೂ ಪಾಕಿಸ್ತಾನಗಳು ರಷ್ಯಾ-ಚೀನಾ ನೇತೃತ್ವದ ಈ ಕೂಟದ ಖಾಯಂ ಸದಸ್ಯರು. ಕೇಂದ್ರೀಯ ಏಷ್ಯಾದ ಪ್ರಾದೇಶಿಕ ಭದ್ರತೆ ಮತ್ತು ಸಹಕಾರಕ್ಕೆ ಇದು ಮಹತ್ವದ್ದು ಎನ್ನುವುದು ಭಾರತದ ಅಭಿಮತ.