ಕಾಸರಗೋಡು: ವಯನಾಡಿನ ಚೂರನ್‍ಮಲೆ ದುರಂತ ಭೂಮಿಯಲ್ಲಿ ಎಲ್ಲರನ್ನೂ ಕಳೆದುಕೊಂಡು ಒಂಟಿಯಾಗಿ ಜೀವನ ಸಾಗಿಸುತ್ತಿರುವ ಬೆರಳೆಣಿಕೆಯ ಜನರ ಮಧ್ಯೆ ಸಾಕು ನಾಯಿಯೊಂದಕ್ಕೆ ಪರಿಹಾರ ಕಾರ್ಯಾಚರಣೆಗೆ ತೆರಳಿದ್ದ ಕಾಸರಗೋಡಿನ ನಿವಾಸಿಗಳು ಆಶ್ರಯದಾತರಾಗಿದ್ದಾರೆ.
ದುರಂತ ಭೂಮಿಯಿಂದ ಈ ನಾಯಿಯನ್ನು ಕಾಸರಗೋಡಿಗೆ ತಲುಪಿಸಿರುವ ತಂಡ, ಇದನ್ನು ಸಾಕುವ ಹೊಣೆಯನ್ನು ತನ್ನ ತಂಡದ ಸದಸ್ಯರೊಬ್ಬರಿಗೆ ನೀಡಿದ್ದಾರೆ. ನಾಯಿಗೆ ವೀರನ್ ಎಂದು ಹೆಸರನ್ನಿರಿಸಲಾಗಿದ್ದು, ಸ್ನೇಹದಿಂದ ಇದನ್ನು ವೀರು ಎಂದು ಕರೆಯುತ್ತಾರೆ. ವಯನಾಡಿನ ಸಂತ್ರಸ್ತ ಪ್ರದೇಶದಲ್ಲಿ ಪರಿಹಾರ ಕಾರ್ಯಾಚರಣೆಗೆ ಕಾಸರಗೋಡಿನ ಎಐವೈಎಫ್‍ನ ಭಗತ್ ಸಿಂಗ್ ಯೂತ್ ಫೋರ್ಸ್ ಕಾರ್ಯಕರ್ತರು ತೆರಳಿದ್ದು, ಅಲ್ಲಿ ಕೆಲವೊಂದು ಸಾಕು ನಾಯಿಗಳ ತಂಡಕ್ಕೆ ಆಹಾರ ಒದಗಿಸುತ್ತಾ ಬಂದಿದ್ದರು. ಉಳಿದ ನಾಯಿಗಳು ಆಹಾರ ಸೇವಿಸಿ ತನ್ನ ಪಾಡಿಗೆ ತೆರಳಿದ್ದರೆ, ವೀರು ಮಾತ್ರ ಕದಲದೆ ಇವರೊಂದಿಗೇ ಹೆಜ್ಜೆ ಹಾಕುತ್ತಿತ್ತು. ಕಾರ್ಯಾಚರಣೆ ಮುಗಿಸಿ ತಮ್ಮ ವಾಹನದಲ್ಲಿ ಊರಿಗೆ ಹೊರಡುತ್ತಿದ್ದಂತೆ ವೀರೂ ಕೂಡಾ ವಾಹನವನ್ನು ಹಿಂಬಾಲಿಸಿ ಬಂದಿದೆ. ಶ್ವಾನವನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡ ತಂಡ ಸನಿಹದ ಪೇಟೆಯಲ್ಲಿ ಇಳಿಸಿ ತಂಡ ಮುಂದೆ ಸಾಗಲು ಯತ್ನಿಸಿದರೂ, ನಾಯಿ ಮಾತ್ರ ವಾಹನವನ್ನು ಹಿಂಬಾಲಿಸಿಕೊಂಡು ಬರಲಾರಂಭಿಸಿತ್ತು. ನಂತರ ನಾಯಿಯನ್ನು ತಮ್ಮ ವಾಹನಕ್ಕೆ ಹತ್ತಿಸಿಕೊಂಡು ಕಾಸರಗೋಡಿಗೆ ತಲುಪಿಸಿದ್ದಾರೆ.
ಲೈವ್‍ಸ್ಟಾಕ್ ಇನ್ಸ್‍ಪೆಕ್ಟರ್ ಜೈಬಿನ್ ಚಾಕೋ ನೇತೃತ್ವದಲ್ಲಿ ವೀರುಗೆ ಚುಚ್ಚುಮದ್ದು ನೀಡಿದ್ದು, ಪ್ರಸಕ್ತ ತಂಡದ ಸದಸ್ಯ ವಿಪಿನ್ ಶ್ವಾನವನ್ನು ಸಾಕುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ.