ನವದೆಹಲಿ: ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ಕ್ಯಾಂಪ್ ಒಂದರಲ್ಲಿ ತಾವು 'ಮಾರ್ಷಲ್ ಆರ್ಟ್ಸ್' ಕಲೆಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ವಿಡಿಯೊವನ್ನು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಶೀಘ್ರವೇ 'ಭಾರತ್ ಡೋಜೊ ಯಾತ್ರೆ' ( Bharat Dojo Yatra) ಪ್ರಾರಂಭವಾಗಲಿದೆ ಎಂದು ಹೇಳಿದ್ದಾರೆ.
ಮಾರ್ಷಲ್ ಆರ್ಟ್ಸ್ ಕಲಿಸುವ ಶಾಲೆ / ಕೋಣೆಗೆ 'ಡೊಜೊ' ಎನ್ನಲಾಗುತ್ತದೆ.
'ಭಾರತ್ ಜೋಡೊ ನ್ಯಾಯ ಯಾತ್ರೆ ವೇಳೆ ನಾವು ಸಾವಿರಾರು ಕಿಲೋಮೀಟರ್ ಪ್ರಯಾಣಿಸಿದೆವು. ನಮ್ಮ ಕ್ಯಾಂಪ್‌ನಲ್ಲಿ 'ಜು-ಜಿಟ್ಸು' ಅಭ್ಯಾಸ ಮಾಡುವುದು ದಿನಚರಿಯಾಗಿತ್ತು. ಫಿಟ್ ಆಗಿರಲು ಆರಂಭವಾದ ಈ ಅಭ್ಯಾಸ, ಬೇಗನೇ ಸಮೂಹ ಚಟುವಟಿಕೆಯಾಗಿ ಪರಿವರ್ತನೆಯಾಯಿತು. ಜೊತೆಗಿದ್ದ ಯಾತ್ರಿಗಳು ಹಾಗೂ ನಾವು ತಂಗುತ್ತಿದ್ದ ಪ್ರದೇಶದ ಸ್ಥಳೀಯ ವಿದ್ಯಾರ್ಥಿಗಳು ಒಟ್ಟು ಸೇರುತ್ತಿದ್ದರು' ಎಂದು ರಾಹುಲ್ ಗಾಂಧಿ ವಿಡಿಯೊಗೆ ಹಾಕಿದ ಒಕ್ಕಣೆಯಲ್ಲಿ ಬರೆದುಕೊಂಡಿದ್ದಾರೆ.
'ಈ ಯುವ ಮನಸ್ಸುಗಳಿಗೆ ಧ್ಯಾನ, 'ಜು-ಜಿಟ್ಸು, ಐಕಿಡೋ ಮತ್ತು ಅಹಿಂಸಾತ್ಮಕ ಸಂಘರ್ಷ ಪರಿಹಾರ ತಂತ್ರಗಳ ಸಾಮರಸ್ಯದ ಮಿಶ್ರಣವಾದ ಈ ಸೌಮ್ಯ ಕಲೆಯ ಸೌಂದರ್ಯವನ್ನು ಪರಿಚಯಿಸುವುದು ನಮ್ಮ ಗುರಿಯಾಗಿದೆ' ಎಂದು ಹೇಳಿದ್ದಾರೆ.
'ಹಿಂಸೆಯನ್ನು ಸೌಮ್ಯತೆಯಾಗಿ ಪರಿವರ್ತಿಸುವ ಮೌಲ್ಯವನ್ನು ಅವರಲ್ಲಿ ತುಂಬುವ ಗುರಿ ನಮ್ಮದು. ಹೆಚ್ಚು ಸಹಾನುಭೂತಿ ಮತ್ತು ಸುರಕ್ಷಿತ ಸಮಾಜವನ್ನು ನಿರ್ಮಿಸುವ ಸಾಧನವನ್ನು ನಾವು ಅವರಿಗೆ ನೀಡಲಿದ್ದೇವೆ. ಈ ಸೌಮ್ಯ ಕಲೆಯನ್ನು ಅಭ್ಯಾಸ ಮಾಡಲು ಪ್ರೇರೇಪಿಸುವ ಆಶಯದೊಂದಿಗೆ ಶೀಘ್ರವೇ ಭಾರತ ಡೋಜೊ ಯಾತ್ರೆ ಬರಲಿದೆ' ಎಂದು ಹೇಳಿದ್ದಾರೆ.