HEALTH TIPS

ಇಳೆಯ ಕಳೆಯನಳಿಸಲವರಿತಪೆಯಾ ಈಗ

"  ಶ್ರೀಕೃಷ್ಣ"

(ಜನ್ಮಾಷ್ಟಮಿಯ ಪ್ರಯುಕ್ತ  ಲೇಖನ)

ಕೃಷ್ಣನಿಗೆ ಒಂದು ಪ್ರಭಾವಲಯವಿದೆ. ಅದು ಆತ ಶ್ರೀಹರಿಯ ಎಂಟನೇ ಅವತಾರವೆಂಬುವುದು. ಆತನಲ್ಲಿ ಆರೋಪಿಸಲ್ಪಟ್ಟಿರುವ ದೈವತ್ವವನ್ನು ಸ್ವಲ್ಪ ಬದಿಗಿಟ್ಟು ಕೃಷ್ಣನನ್ನು ತಿಳಿಯಲು ಪ್ರಯತ್ನಿಸಿದಾಗ ನಮಗೆ ಕಂಡುಬರುವುದು ಆತನೊಬ್ಬ ಬಹುದೊಡ್ಡ ರಾಜಕೀಯ ಮುತ್ಸದ್ದಿ ಎಂಬುವುದು. ಕರ್ಣ ಭೇದನದ ಪ್ರಸಂಗವನ್ನೇ ತೆಗೆದುಕೊಳ್ಳಿ, ಎಂತಹ ಸೂಕ್ತ ಸಮಯದಲ್ಲಿ ಕರ್ಣನ ಬದುಕಿನ ರಹಸ್ಯವನ್ನು ಆತನಿಗೆ ತಿಳಿಸಿ ಅವನಲ್ಲಿರುವ ಪಾಂಡವ ದ್ವೇಷವನ್ನು ಸಮಾಪ್ತಿ ಮಾಡಿಬಿಟ್ಟ! ಕೊನೆಗೇ ಕರ್ಣನೇ ಹೇಳಿದನಲ್ವೆ- "ಹೊರೆದ ದಾತಾರಂಗೆ ಹಗೆವರ ಶಿರವ ತರಿದೊಪ್ಪಿಸುವೆನೆಂಬೀ ಭರದೊಳಿರ್ದೆನು ಕೌರವೇಂದ್ರನ ಕೊಂದೆ ನೀನೆಂದ."
ಇನ್ನೊಂದು ಆತನ ಮುತ್ಸದ್ದಿತನಕ್ಕೆ ಸಾಕ್ಷಿ ಮಾಗದ ವಧೆಯ ಘಟನೆ. ಮಾಗದ ಹದಿನೆಂಟು ಬಾರಿ ಕೃಷ್ಣನನ್ನು ಕೊಲ್ಲಲು ಪ್ರಯತ್ನಿಸಿದ್ದ. ಪ್ರತಿಸಲವೂ ಕೃಷ್ಣ ಸೋತವನಂತೆ ನಟಿಸಿ ಓಡಿ ಹೋಗಿದ್ದ. ಆದರೆ ಮಾಗದನೊಂದಿಗೆ ಬಂದಿದ್ದ ಹೆಚ್ಚಿನ ಸೇನೆಯನ್ನು ನಾಶಮಾಡಿದ್ದ. ಕೊನೆಗೆ ಯಾವುದೇ ಸೇನೆಯನ್ನು ಉಪಯೋಗಿಸದೆ, ಮಾಗದನ ಮಾತಿನಿಂದಲೇ ಅವನನ್ನು ಕಟ್ಟಿಹಾಕಿ ಭೀಮನಿಂದ ಅವನನ್ನು ಕೊಲಿಸುತ್ತಾನೆ.
ಇನ್ನೊಂದು ಘಟನೆ ಹಂಸ ಢಿಭಿಕರದ್ದು. ಇವರಿಬ್ಬರೂ ಸಹೋದರರು ಮಾಗದನ ಸಹವರ್ತಿಗಳು. ಕರೂಷದೇಶದ ಅರಸು ಕುಮಾರರು. ಅವರಿಗೆ ಒಂದು ವಿಚಿತ್ರ ವರವಿತ್ತು. ಅವರನ್ನು ಯಾರೂ ಕೊಲ್ಲಲಾರರು. ಅವರೇ ಆತ್ಮಹತ್ಯೆ ಮಾಡಿಯೇ ಸಾಯಬೇಕು. ಅಣ್ಣತಮ್ಮಂದಿರು ಒಬ್ಬರನ್ನೊಬ್ಬರು ತುಂಬಾ ಅನ್ಯೋನ್ಯವಾಗಿ ಪ್ರೀತಿಸುತ್ತಿದ್ದರು. ಒಮ್ಮೆ ಅವರು ಬೇರೆ ಬೇರೆ ಯಾಗಿ ಯುದ್ಧಮಾಡುತ್ತಿರುವಾಗ ಢಿಭಿಕ ನಲ್ಲಿ ನಿನ್ನ ತಮ್ಮ ಹಂಸ ಸತ್ತ ಅಂತ ಹೇಳುತ್ತಾನೆ. ಅದನ್ನು ಕೇಳಿದ ಡಿಭಿಕ ಆತ್ಮಹತ್ಯೆಗೆ ಶರಣಾಗುತ್ತಾನೆ. ಅದನ್ನೇ ಹೋಗಿ ಹಂಸನಲ್ಲಿ ಹೇಳಿದಾಗ ಅವನೂ ಸಾಯುತ್ತಾನೆ. ಹೀಗೆ ಸುಲಭದಲ್ಲಿ ಅವರ ವಧೆಯಾಗುತ್ತದೆ.
ಭೀಷ್ಮಾಚಾರ್ಯರು ಕುರುಕ್ಷೇತ್ರದಲ್ಲಿ ಅಜೇಯರಾಗಿ ಮೆರೆಯುತ್ತಾ, ದಿನವೊಂದಕ್ಕೆ ಹತ್ತು ಸಾವಿರ ಮುಕುಟ ವರ್ಧನರನ್ನು ಕೊಲ್ಲುತ್ತಿದ್ದರು. ಹೀಗೆಯೇ ಮುಂದುವರೆಯುತ್ತಾ ಹೋದರೆ ಪಾಂಡವರಿಗೆ ಉಳಿಗಾಲವಿಲ್ಲವೆಂದು ಭಾವಿಸಿದ ಕೃಷ್ಣ, ಒಂಬತ್ತೆನೆಯೇ ದಿನ ರಾತ್ರಿ ಯುದ್ಧ ಮುಗಿದ ಮೇಲೆ ಪಾಂಡವರನ್ನು ಕೂಡಿಕೊಂಡು ಭೀಷ್ಮರ ಬಿಡದಿಗೆ ಹೋಗಿ ಅವರಲ್ಲಿ- ನೀವು  ಪಾಂಡವರನ್ನು ಕಾಯಬೇಕು ಎನ್ನುತ್ತಾನೆ. ವಾಸ್ತವವಾಗಿ ಅವರಿಗೆ ಭೀಷ್ಮಪಿತಾಮಹರ 'ಕಾಯ' ಬೇಕಿತ್ತು, ಭೀಷ್ಮರು ಸಾಯಬೇಕಿತ್ತು. ಭೀಷ್ಮರು, ಮರುದಿನ ಶಿಖಂಡಿ ತನ್ನೆದುರು ಬಂದರೆ ತಾನು ಶಸ್ತ್ರತ್ಯಾಗ ಮಾಡಿ ಯುದ್ಧರಂಗದಿಂದ ನಿವೃತ್ತನಾಗುವುದಾಗಿ  ಹೇಳುತ್ತಾರೆ. ಹೀಗೆ ಭೀಷ್ಮ ಪರ್ವ ಕೊನೆಯಾಗುತ್ತದೆ. ಮತ್ತೆ ಹದಿನೈದನೇ ದಿನ ದ್ರೋಣರೂ ಅಜೇಯರಾಗಿ ಮೆರೆಯುತ್ತಿದ್ದಾಗ, ಧರ್ಮಜನ ಬಾಯಿಯಿಂದ- "ಅಶ್ವತ್ಥಾಮೋ ಹತಃ ಕುಂಜರ" ಅಂತ ಹೇಳಿಸಿ, ಕುಂಜರ ಎಂಬ ಶಬ್ಧ ಕೇಳದಂತೆ ಶಂಖ ಊದುತ್ತಾನೆ. ತನ್ನ ಮಗ ಅಶ್ವತ್ಥಾಮನೇ ಸತ್ತನೆಂದು ತಿಳಿದು ದ್ರೋಣರೂ ಪ್ರಾಣತ್ಯಾಗ ಮಾಡುತ್ತಾರೆ.
 ಇತ್ತೀಚೆಗೆ   ನಾವೆಲ್ಲ ಆಗಾಗ ಕೇಳುತ್ತಿರುವ ಶಬ್ದ " ಮಾನಸಿಕ ಒತ್ತಡ" ಈ ಒತ್ತಡದಿಂದಾಗಿ ಅನೇಕ ರೋಗಗಳು ಹುಟ್ಟುತ್ತವೆ. ಶ್ರೀ ಕೃಷ್ಣ ಪರಮಾತ್ಮ 5000 ವರ್ಷಗಳ ಹಿಂದೆಯೇ ಈ ಒತ್ತಡವನ್ನು ನಿವಾರಿಸುವ ಸುಲಭ ಉಪಾಯವನ್ನು ಹೇಳಿದ್ದಾನೆ, 
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ ॥

ನಿಮ್ಮ  ಕರ್ಮವನ್ನು ಮಾಡುತ್ತಾ ಇರಿ , ಆದರೆ ಕರ್ಮದ  ಫಲಗಳ ಮೇಲೆ ಅಧಿಕಾರ ಸ್ಥಾಪನೆ ಮಾಡಬೇಡಿ. ಅದನ್ನು ಕೊಡಬೇಕಾದವ ದೇವರು. ನಿಮ್ಮ ಕರ್ಮಗಳ ಫಲಗಳಿಗೆ  ನೀವೇ ಹಕ್ಕುದಾರರೆಂದು  ಎಂದಿಗೂ ಪರಿಗಣಿಸಬೇಡಿ. ( ಭಗವದ್ಗೀತೆ, ಅಧ್ಯಾಯ II, ಶ್ಲೋಕ 47)
ಒತ್ತಡಕ್ಕೆ ಕಾರಣವೇ ಅತಿಯಾದಂತಹ ಮಹತ್ವಾಕಾಂಕ್ಷೆ. ಕರ್ಮಗಳನ್ನು ಮಾಡಿ,  ಅದರ ಫಲದ ನಿರೀಕ್ಷೆಯಲ್ಲಿರುವಾಗ, ನಿರೀಕ್ಷಿತ ಫಲಗಳು ಸಿಗದೇ ಇದ್ದರೆ  ಒತ್ತಡ ಉಂಟಾಗುತ್ತದೆ. ಆದರಿಂದ ಫಲಾಫಲಗಳನ್ನು ದೇವರ ಮೇಲೆ ಬಿಡುವುದೇ ಉತ್ತಮ ದಾರಿ.  ಈ ಮಾತನ್ನು ಬದುಕಿನಲ್ಲಿ ಆಚರಣೆಗೆ ತಂದರೆ  ಒತ್ತಡ ಇರಲು ಸಾಧ್ಯವೇ ಇಲ್ಲ.  
ತಾಯಿಗೆ ಬಾಯಿಯಲ್ಲಿ ಮೂರುಲೋಕಗಳನ್ನು ತೋರಿಸಿದುದು, ನಳಕೂಬರ ಮಣಿಗ್ರೀವರ ಶಾಪವಿಮೋಚನೆ, ಕುಚೇಲನಿಗೆ ಅನುಗ್ರಹ, ದ್ರೌಪದಿಗೆ ಅಕ್ಷಯಾಂಬರವನ್ನಿತ್ತುದುದು, ಕುಬ್ಜೆಯ ಡೊಂಕನ್ನು ತಿದ್ದಿ ಅವಳನ್ನು ರೂಪಸಿಯನ್ನಾಗಿ ಮಾಡಿದ್ದು, ಕಾಲೀಯಮಥನದ ಸನ್ನಿವೇಷ, ಚಾಣೂರ ಮುಷ್ಟಿಕರನ್ನು ಕೊಂದದ್ದು, ಅಕ್ಷಯ ಪಾತ್ರೆಯ ಅಡಿಯಲ್ಲಿ ಉಳಿದ ಒಂದಗಳು ಅನ್ನವನ್ನು ತಿಂದು ದೂರ್ವಾಸರ ಹೊಟ್ಟೆ ತುಂಬುವಂತೆ ಮಾಡಿದ್ದು, ಕುರುಕ್ಷೇತ್ರದಲ್ಲಿ ವಿಶ್ವರೂಪ ತೋರಿಸಿದುದು, ಹಗಲಲ್ಲೇ ಸೈಂಧವನ ವಧೆಗಾಗಿ ರಾತ್ರಿಯಾಗುವಂತೆ ಮಾಡಿದುದು, ಕಾಲ ಯವನನನ್ನು ಮುಚುಕುಂದನಿಂದ ಕೊಲಿಸಿದುದು  ಇವಲ್ಲಾ ಕೃಷ್ಣನ ಅತಿಮಾನುಷ ಕೃತ್ಯಗಳು.
ಅಧರ್ಮಿಗಳಾದರೆ ತನ್ನ ಸಂಬಂಧಿರನ್ನೂ ಕೃಷ್ಣ ಉಳಿ ಸಿರಲಿಲ್ಲ. ಕಂಸ, ಶಿಶುಪಾಲ ದಂತವಕ್ರರು, ಪೌಂಢ್ರಕ ವಾಸುದೇವ ಇವನ್ನೆಲ್ಲ ಕೊಂದು ಧರ್ಮದ ರಕ್ಷಕನೆನಿಸಿದವ ಕೃಷ್ಣ.
ತನ್ನವರಾದ ಯಾದವರೂ ಅಧರ್ಮಿಗಳಾದಾಗ ಅವರ ನಾಶವನ್ನು ಸಂಕಲ್ಪಿಸಿ ಪ್ರಭಾತ ಕ್ಷೇತ್ರದಲ್ಲಿ ಅವರವರೇ ಸುರಾಪಾನಮಾಡಿ ಹೊಡೆದುಕೊಂಡು ಸಾಯುವಂತೆ ಮಾಡುತ್ತಾನೆ.
ಕೊನೆಗೆ ದೇಹ ಧರ್ಮದಂತೆ ವ್ಯಾಧನೊಬ್ಬನ ಬಾಣಕ್ಕೆ ತನ್ನ ಪಾದವನ್ನು ಒಡ್ಡಿ, ತಾನೂ ದೇಹತ್ಯಾಗ ಮಾಡಿದವ ಯೋಗೇಶ್ವರ ಕೃಷ್ಣ. 
ಕೃಷ್ಣಾಯ ವಾಸುದೇವಾಯ ದೇವಕೀ ನಂದನಾಯಚ|
ನಂದಗೋಪ ಕುಮಾರಾಯ ಗೋವಿಂದಾಯ ನಮೋ ನಮಃ||     
 ನಾಡಿನ ಸಮಸ್ತರಿಗೂ ಕೃಷ್ಣ ಜನ್ಮಾಷ್ಟಮಿಯ ಶುಭೇಚ್ಛೆಗಳು. 

- ದಾಮೋದರ ಶೆಟ್ಟಿ,  ಇರುವೖಲು

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries