ಗುವಾಹಟಿ: 'ಅಸ್ಸಾಂ ವಿಧಾನಸಭೆಯ ಅಧಿವೇಶನದ ಅವಧಿಯಲ್ಲಿ ಶುಕ್ರವಾರದ ದಿನ ಮುಸ್ಲಿಂ ಶಾಸಕರಿಗೆ 'ನಮಾಜ್' ಸಲ್ಲಿಸಲು ನೀಡಲಾಗುತ್ತಿದ್ದ ಎರಡು ಗಂಟೆಗಳ ವಿರಾಮದ ಅವಧಿಯನ್ನು ರದ್ದುಗೊಳಿಸಲಾಗಿದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
ಗುವಾಹಟಿ: 'ಅಸ್ಸಾಂ ವಿಧಾನಸಭೆಯ ಅಧಿವೇಶನದ ಅವಧಿಯಲ್ಲಿ ಶುಕ್ರವಾರದ ದಿನ ಮುಸ್ಲಿಂ ಶಾಸಕರಿಗೆ 'ನಮಾಜ್' ಸಲ್ಲಿಸಲು ನೀಡಲಾಗುತ್ತಿದ್ದ ಎರಡು ಗಂಟೆಗಳ ವಿರಾಮದ ಅವಧಿಯನ್ನು ರದ್ದುಗೊಳಿಸಲಾಗಿದೆ' ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ತಿಳಿಸಿದ್ದಾರೆ.
'ಮುಂದಿನ ಅಧಿವೇಶನದಿಂದಲೇ ಈ ನಿಯಮ ಅನ್ವಯವಾಗಲಿದೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ಎರಡು ಗಂಟೆ ಕಾಲ ನೀಡುತ್ತಿದ್ದ 'ಜುಮ್ಮಾ' ವಿರಾಮವನ್ನು ರದ್ದುಗೊಳಿಸಿ, ಅಧಿವೇಶನದಲ್ಲಿ ಹೆಚ್ಚಿನ ಉತ್ತಮ ವಿಷಯಗಳ ಚರ್ಚೆಗೆ ಆದ್ಯತೆ ನೀಡುವ ಮೂಲಕ ವಸಹಾತುಶಾಹಿ ಕಾಲದಲ್ಲಿ ಜಾರಿಯಲ್ಲಿದ್ದ ನಿರ್ಧಾರವನ್ನು ಕೊನೆಗೊಳಿಸಲಾಗಿದೆ. 1937ರಲ್ಲಿ ಮುಸ್ಲಿಂ ಲೀಗ್‌ನ ಸೈಯದ್ ಸಾದುಲ್ಲಾ ಅವಧಿಯಲ್ಲಿ ಈ ಪದ್ಧತಿಯನ್ನು ಜಾರಿಗೆ ತರಲಾಗಿತ್ತು' ಎಂದು ಶರ್ಮಾ ಅವರು 'ಎಕ್ಸ್' ಮೂಲಕ ತಿಳಿಸಿದ್ದಾರೆ.
'ಗೌರವಾನ್ವಿತ ಸ್ವೀಕರ್ ಬಿಸ್ವಜಿತ್ ದೈಮಾರಿ ಹಾಗೂ ಶಾಸಕರು ಸೇರಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದ್ದಾರೆ' ಎಂದು ಶರ್ಮಾ ಹೇಳಿದ್ದಾರೆ.
ಹಿಂದಿನ ಬೇಸಿಗೆ ಅಧಿವೇಶನದಲ್ಲಿ ಶುಕ್ರವಾರ ಎರಡು ತಾಸುಗಳ ಕಾಲ ವಿರಾಮ ನೀಡಲಾಗಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
'ವಿರಾಮದ ನಿರ್ಧಾರ ಕೈಬಿಡಲು ವಿಧಾನಸಭೆಯ ನೀತಿ ಸಮಿತಿಯು ಅವಿರೋಧವಾಗಿ ಒಪ್ಪಿಕೊಂಡಿದೆ' ಎಂದು ಈಗಾಗಲೇ ಅಧಿಕೃತ ನಿರ್ಧಾರದ ಪ್ರಕಟಣೆಯನ್ನು ಎಲ್ಲರಿಗೂ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.
1937ರಲ್ಲಿ ಅಸ್ಸಾಂ ವಿಧಾನಸಭೆಯಲ್ಲಿ ಈ ಪದ್ಧತಿ ಜಾರಿಗೆ ಬಂದಿತ್ತು. ಶುಕ್ರವಾರ 11 ಗಂಟೆಗೆ ಅಧಿವೇಶನ ಸ್ಥಗಿತಗೊಳಿಸಿ, ಮುಸ್ಲಿಂ ಶಾಸಕರಿಗೆ ನಮಾಜ್ ಮಾಡಲು ಅವಕಾಶ ನೀಡಲಾಗುತ್ತಿತ್ತು. ಮಧ್ಯಾಹ್ನ ಊಟದ ನಂತರ ಮತ್ತೆ ಅಧಿವೇಶನ ನಡೆಯುತ್ತಿತ್ತು.
ಮುಸ್ಲಿಂ ವಿರೋಧಿ ನಡೆ: ರಾಜಕೀಯ ಲಾಭಕ್ಕಾಗಿ ಬಿಜೆಪಿ ನೇತೃತ್ವದ ಸರ್ಕಾರವು ಈ ನಿರ್ಧಾರ ತೆಗೆದುಕೊಂಡಿದೆ ಎಂದು ಪ್ರಮುಖ ಪ್ರತಿಪಕ್ಷ ಎಐಯುಡಿಎಫ್ ಆರೋಪಿಸಿದೆ.