ಪ್ರಯಾಗ್‌ರಾಜ್: 'ಸುಪ್ರೀಂ ಕೋರ್ಟ್ ಆದೇಶದಂತೆ ವಾರಾಣಸಿಯ ಗ್ಯಾನವಾಪಿ ಮಸೀದಿ ಸಂಕೀರ್ಣದಲ್ಲಿರುವ 'ವಜುಖಾನಾ' ಸಂರಕ್ಷಿತ ಪ್ರದೇಶವಾಗಿದ್ದು, ಭಾರತೀಯ ಪುರಾತತ್ವ ಇಲಾಖೆಯ (ಎಎಸ್‌ಐ) ಸಮೀಕ್ಷೆಗೆ ಅವಕಾಶ ನೀಡುವುದಿಲ್ಲ' ಎಂದು ಮಸೀದಿ ಆಡಳಿತ ಮಂಡಳಿಯು ಅಲಹಾಬಾದ್ ಹೈಕೋರ್ಟ್‌ಗೆ ತಿಳಿಸಿದೆ.
ವಜುಖಾನಾದಲ್ಲಿ(ನಮಾಜ್‌ಗೂ ಮುನ್ನ ಮುನ್ನ ಶುದ್ಧೀಕರಣಕ್ಕೆ ಬಳಸುವ ಕೊಳ) ಸಮೀಕ್ಷೆ ನಡೆಸಲು ಅನುಮತಿ ನೀಡುವಂತೆ ಕೋರಿ ಎಎಸ್‌ಐ, ಅಲಹಾಬಾದ್ ಹೈಕೋರ್ಟ್ ಅನುಮತಿ ಕೋರಿದ್ದ ಬೆನ್ನಲ್ಲೇ ಗ್ಯಾನವಾಪಿ ಮಸೀದಿಯ ಆಡಳಿತ ನಿರ್ವಹಣೆಯ ಹೊಣೆ ಹೊತ್ತಿರುವ ಅಂಜುಮನ್ ಇಂತೆಜಾಮಿಯಾ ಸಮಿತಿ ಪ್ರತಿಯಾಗಿ ಅಫಿಡವಿಟ್ ಸಲ್ಲಿಸಿದೆ.
'ವಜುಖಾನಾ' ಹಾಗೂ 'ಶಿವಲಿಂಗ' ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈಗಾಗಲೇ ತಡೆಯಾಜ್ಞೆ ನೀಡಿದೆ. ಅದನ್ನು ಸಂರಕ್ಷಿಸಿ, ಭದ್ರತೆ ಒದಗಿಸುವ ಜವಾಬ್ದಾರಿಯನ್ನು ವಾರಾಣಸಿಯ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗೆ ವಹಿಸಲಾಗಿದೆ. ಇದರ ಹೊರತಾಗಿ ಯಾವುದೇ ಕ್ರಮಕ್ಕೂ ಅನುಮತಿ ನೀಡಿಲ್ಲ. ಈ ವಿಚಾರಕ್ಕೆ ಸಂಬಂಧಿಸಿದಂತೆ 2022ರ ಆದೇಶದ ಕುರಿತು ಯಾವುದೇ ಸ್ಪಷ್ಟೀಕರಣ ಬೇಕಿದ್ದರೆ, ಅರ್ಜಿದಾರರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು' ಎಂದು ಪ್ರತಿ ಅಫಿಡವಿಟ್‌ನಲ್ಲಿ ತಿಳಿಸಿದೆ.
'ಗ್ಯಾನವಾಪಿಯಲ್ಲಿ ಶಿವಲಿಂಗ ಹೊರತುಪಡಿಸಿ ವಜುಖಾನಾದಲ್ಲಿ ಎಎಸ್‌ಐ ಸಮೀಕ್ಷೆಗೆ ಅನುಮತಿ ನೀಡುವಂತೆ ಕೋರಿ 2023ರ ಅಕ್ಟೋಬರ್ 21ರಂದು ಹಿಂದೂ ಸಮುದಾಯದವರು ಸಲ್ಲಿಸಿದ್ದ ಅರ್ಜಿಯನ್ನು ಜಿಲ್ಲಾ ನ್ಯಾಯಾಲ ತಿರಸ್ಕರಿಸಿತ್ತು. ಈ ವಿಚಾರವು ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿದ್ದು, ಮಧ್ಯಂತರ ಆದೇಶಕ್ಕೆ ಒಳಪಡುತ್ತದೆ ಎಂದು ಜಿಲ್ಲಾ ನ್ಯಾಯಾಲಯವು ಕೂಡ ಸ್ಪಷ್ಟಪಡಿಸಿತ್ತು' ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.
ಅಫಿಡವಿಟ್‌ನಲ್ಲಿನ ವಿಷಯವನ್ನು ಪರಿಗಣಿಸಿದ ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್‌ವಾಲ್ ಅವರು, ಪ್ರತಿ ಅಫಿಡವಿಟ್ ಸಲ್ಲಿಸಲು ಅರ್ಜಿದಾರರ ಪರ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಿದರು. ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 9ಕ್ಕೆ ಮುಂದೂಡಿದರು.