ತಿರುವನಂತಪುರಂ: ಮಲಯಾಳ ನಟ ಹಾಗೂ ಶಾಸಕ ಎಂ. ಮುಕೇಶ್, ನಟ ಜಯಸೂರ್ಯ, ಹಿರಿಯ ನಟರಾದ ಮಣಿಯಣ್ ಪಿಳ್ಳ ರಾಜು, ಇಡವೇಳ ಬಾಬು, ಬಾಬುರಾಜ್ ವಿರುದ್ಧ ಮಲಯಾಳ ಸಿನಿಮಾ ನಟಿ ಮೀನೂ ಮುನೀರ್ ಅವರು ಸೋಮವಾರ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ.
ಹಲವು ವರ್ಷಗಳ ಹಿಂದೆ ಈ ಕೃತ್ಯ ನಡೆದಿದೆ. ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯು ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಬೆಳಕು ಚೆಲ್ಲಿದ ಬೆನ್ನಲ್ಲೇ, ಮತ್ತಷ್ಟು ನಟರ ವಿರುದ್ಧ ನಟಿಯರು ಬಹಿರಂಗವಾಗಿ ಆರೋಪಿಸಿದ್ದಾರೆ.
ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ನಾಲ್ವರು ನಟರ ಹೆಸರು ಉಲ್ಲೇಖಿಸಿ ನಟಿ ಮೀನೂ ಮುನೀರ್ ಆರೋಪ ಮಾಡಿದ್ದರೆ, ನಟಿ ಗೀತಾ ವಿಜಯನ್ ಅವರು ನಿರ್ಮಾಪಕ ತುಳಸಿದಾಸ್ ಅವರು 1991ರಲ್ಲಿ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ, ಬಿಜೆಪಿ ಯುವ ಮೋರ್ಚಾ ಹಾಗೂ ಮಹಿಳಾ ಕಾಂಗ್ರೆಸ್ ಘಟಕದ ಕಾರ್ಯಕರ್ತರು ಕೊಲ್ಲಂನಲ್ಲಿರುವ ಶಾಸಕರ ಮನೆಗೆ ಬೃಹತ್ ಮೆರವಣಿಗೆ ನಡೆಸಿದರು. ಆರೋಪಿ ವಿರುದ್ಧ ಕೂಡಲೇ ಪ್ರಕರಣ ದಾಖಲಿಸಬೇಕು, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು' ಎಂದು ಆಗ್ರಹಿಸಿದರು.
ಆರೋಪದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಕೊಲ್ಲಂನ ಶಾಸಕ ಮುಕೇಶ್ ನಿರಾಕರಿಸಿದರು. ಮುಕೇಶ್ ಅವರು ಮಲಯಾಳದಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 2016 ಹಾಗೂ 2021ರಲ್ಲಿ ಸಿಪಿಐ(ಎಂ) ಪಕ್ಷದಿಂದ ಕೊಲ್ಲಂ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ಗೆದ್ದು ಶಾಸಕರಾಗಿದ್ದಾರೆ.
ನಟ ಮುಕೇಶ್ ಮಾತ್ರವಲ್ಲದೆ, ಇತರೆ ನಟರೂ ತಮ್ಮ ಮೇಲಿನ ಆರೋಪಗಳು 'ಆಧಾರರಹಿತವಾದುದು' ಎಂದಿದ್ದಾರೆ.
ತನಿಖೆಗೆ ಆಗ್ರಹ: 'ಮಲಯಾಳ ಸಿನಿಮಾ ಉದ್ಯಮದ ಮೇಲೆ ಕೇಳಿಬಂದಿರುವ ಆರೋಪಗಳ ಕುರಿತಂತೆ ಸಮಗ್ರ ತನಿಖೆ ನಡೆಸಬೇಕು ಎಂದು ನಟ ಮಣಿಯಣ್ ಪಿಳ್ಳ ರಾಜು ಆಗ್ರಹಿಸಿದ್ದಾರೆ. ಇನ್ನು ಹಲವರ ಹೆಸರು ಬಹಿರಂಗವಾಗಲಿದ್ದು, ಅವುಗಳ ಹಿಂದೆ ಬಹುಹಿತಾಸಕ್ತಿಗಳು ಇರುವ ಸಾಧ್ಯತೆಗಳಿವೆ' ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.
'ಕೆಲವರು ಪರಿಸ್ಥಿತಿಯ ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಆರೋಪಿಗಳಲ್ಲಿ ಅಮಾಯಕರು ಹಾಗೂ ತಪ್ಪಿತಸ್ಥರು ಇರುತ್ತಾರೆ. ಹೀಗಾಿ ಸಮಗ್ರ ತನಿಖೆಗೆ ಅಗತ್ಯವಿದೆ' ಎಂದು ಪ್ರತಿಪಾದಿಸಿದ್ದಾರೆ.
ರಾಜೀನಾಮೆ ಪರ್ವ
ದುರ್ವರ್ತನೆ, ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ಆರೋಪ ಮಾಡಿದ ಬೆನ್ನಲ್ಲೇ, ಮಲಯಾಳ ಸಿನಿಮಾ ನಿರ್ದೇಶಕ ರಂಜಿತ್ ಅವರು ಕೇರಳ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸ್ಥಾನಕ್ಕೆ ಮತ್ತು ನಟ ಸಿದ್ದೀಕ್ ಅವರು ಮಲಯಾಳ ಸಿನಿಮಾ ಕಲಾವಿದರ ಸಂಘದ (ಅಮ್ಮ) ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಭಾನುವಾರ ರಾಜೀನಾಮೆ ಸಲ್ಲಿಸಿದ್ದರು.
ರಂಜಿತ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಕೋರಿ ಬಂಗಾಳಿ ನಟಿ ಶ್ರೀ ಲೇಖಾ ಮಿತ್ರ ಅವರು ಕೊಚ್ಚಿ ನಗರ ಪೊಲೀಸರಿಗೆ ಮನವಿ ಸಲ್ಲಿಸಿದ್ದಾರೆ. ರಾಜ್ಯ ಸರ್ಕಾರ ಭಾನುವಾರ ರಚಿಸಿರುವ ವಿಶೇಷ ತಂಡಕ್ಕೆ ಈ ಪ್ರಕರಣವನ್ನು ವರ್ಗಾಯಿಸುವ ನಿರೀಕ್ಷೆಯಿದೆ.
'ಅಪರಾಧಿಗಳನ್ನು ರಕ್ಷಿಸಲು ಯತ್ನ'
ಕೊಚ್ಚಿ: 'ಮಲಯಾಳ ಸಿನಿಮಾ ಕ್ಷೇತ್ರದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿಗಳನ್ನು ಎಡಪಕ್ಷಗಳ ನೇತೃತ್ವದ ರಾಜ್ಯ ಸರ್ಕಾರವು ರಕ್ಷಿಸಲು ಪ್ರಯತ್ನಿಸುತ್ತಿದೆ' ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಆರೋಪಿಸಿದ್ದಾರೆ.
'ನ್ಯಾಯಮೂರ್ತಿ ಕೆ. ಹೇಮಾ ಸಮಿತಿಯು ಮಲಯಾಳ ಚಿತ್ರರಂಗದಲ್ಲಿ ಕಲಾವಿದೆಯರ ಮೇಲಿನ ಲೈಂಗಿಕ ದೌರ್ಜನ್ಯದ ಕುರಿತು ಬೆಳಕು ಚೆಲ್ಲಿದ ಕುರಿತು ತನಿಖೆ ನಡೆಸಲು ರಾಜ್ಯ ಸರ್ಕಾರ ಒಪ್ಪಿಲ್ಲ. ನಟಿಯರು ಎದುರಿಸಿದ ಲೈಂಗಿಕ ಕಿರುಕುಳದ ಕುರಿತು ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡ ರಚಿಸಲು ಭಾನುವಾರ ಒಪ್ಪಿಗೆ ಸೂಚಿಸಿದೆ.
ಈ ತಂಡಕ್ಕೆ ಮಹಿಳಾ ಐಪಿಎಸ್ ಅಧಿಕಾರಿಗಳ ಬದಲಾಗಿ ಪುರುಷ ಅಧಿಕಾರಿಗಳನ್ನು ನೇಮಿಸಿದ್ದು ಏಕೆ' ಎಂದು ಅವರು ಪ್ರಶ್ನಿಸಿದ್ದಾರೆ. 'ಹೇಮಾ ಸಮಿತಿ ಮುಂದೆ ಸಂತ್ರಸ್ತೆಯರು ನೀಡಿದ ಹೇಳಿಕೆ ಆಧರಿಸಿ ಹಿರಿಯ ಮಹಿಳಾ ಐಪಿಎಸ್ ಅಧಿಕಾರಿಯ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂದು ಮೊದಲಿನಿಂದಲೂ ಒತ್ತಾಯಿಸುತ್ತಿದ್ದೇವೆ. ಮುಖ್ಯಮಂತ್ರಿಗಳ ಕಚೇರಿಯು ಬಿಡುಗಡೆಗೊಳಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಚಾರವನ್ನೇ ಪ್ರಸ್ತಾಪಿಸಿಲ್ಲ' ಪತ್ರಿಕಾಗೋಷ್ಠಿಯಲ್ಲಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ತನಿಖೆ ನಡೆಸಿ ತಪ್ಪಿತಸ್ಥರಿಗೆ ಕಾನೂನಿನ ಅಡಿಯಲ್ಲಿ ಶಿಕ್ಷೆ ಕೊಡಿಸಿ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಸರ್ಕಾರದ ಜವಾಬ್ದಾರಿ. ಕಳೆದ ನಾಲ್ಕೂವರೆ ವರ್ಷದಲ್ಲಿ ಸರಣಿ ಅಪರಾಧಗಳು ನಡೆದಿದ್ದರೂ ಪ್ರಕರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಅಸಹ್ಯ ಮೂಡಿಸುತ್ತಿರುವ ಅಪರಾಧ ಕೃತ್ಯ'
ಮುಂಬೈ: 'ಯಾವುದೇ ಸ್ಥಳ ಅಥವಾ ಸಂದರ್ಭದಲ್ಲಿ ಮಹಿಳೆಯರಿಗೆ ಸುರಕ್ಷಿತರಾಗಿರಬೇಕು. ಅಂತಹ ವಾತಾವರಣ ಸೃಷ್ಟಿಸುವ ಹೊಣೆಗಾರಿಕೆ ಪುರುಷರ ಮೇಲಿದ್ದು ಇತ್ತೀಚಿಗಿನ ದಿನಗಳಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಅಪರಾಧಗಳು 'ಅಸಹ್ಯ' ಮೂಡಿಸುತ್ತಿವೆ' ಎಂದು ನಟ ವಿಕ್ರಂ ತಿಳಿಸಿದ್ದಾರೆ.
ಕೋಲ್ಕತ್ತದಲ್ಲಿ ಮಹಿಳಾ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಮಲಯಾಳ ಸಿನಿಮಾದಲ್ಲಿ ನಟಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಕುರಿತಂತೆ ಈ ಪ್ರತಿಕ್ರಿಯೆ ನೀಡಿದ್ದಾರೆ. 'ಎಲ್ಲ ಮಹಿಳೆಯರನ್ನು ರಕ್ಷಿಸುವ ಅಗತ್ಯವಿದೆ. ಬೆಳಿಗ್ಗೆ 3 ಗಂಟೆಗೂ ಬೀದಿಯಲ್ಲಿ ಮಹಿಳೆಯರು ಒಬ್ಬರೇ ನಡೆದುಕೊಂಡು ಮನೆ ತಲುಪುವಂತಹ ವಾತಾವರಣ ಸೃಷ್ಟಿಯಾಗಬೇಕು. ಯಾರೂ ಕೂಡ ಆಕೆಗೆ ತೊಂದರೆ ನೀಡಬಾರದು. ಪ್ರತಿ ಪುರುಷನು ಆಕೆಗೆ ರಕ್ಷಣೆ ನೀಡಬೇಕು' ಎಂದು ಅವರು ಮನವಿ ಮಾಡಿದ್ದಾರೆ.